ಕಾಸರಗೋಡು: ಮಾಲಿನ್ಯ ಮುಕ್ತ ನವ ಕೇರಳ ಘೋಷಣೆ ಮಾರ್ಚ್ 30 ಅಂತರಾಷ್ಟ್ರೀಯ ಶೂನ್ಯ ತ್ಯಾಜ್ಯ ದಿನದಂದು ನಡೆಯಲಿದೆ. ಮಾರ್ಚ್ 17 ರಿಂದ 22 ರ ವರೆಗೆ ವಾರ್ಡ್ ಮಟ್ಟದ ಘೋಷಣೆ ಹಾಗೂ ಅಧಿವೇಶನಗಳನ್ನು ಆಯೋಜಿಸಲಾಗುತ್ತದೆ. ವಾರ್ಡ್ ಸದಸ್ಯರ ನೇತೃತ್ವದಲ್ಲಿರುವ ಕಾರ್ಯಕಾರಿ ಸಮಿತಿಯು ಸಭೆ ಸೇರಿ ವಾರ್ಡ್‍ನ ಸಾಧನೆಗಳನ್ನು ವಿಶ್ಲೇಷಿಸುತ್ತದೆ. ಮಾರ್ಚ್ 2023 ರಿಂದ ಫೆಬ್ರವರಿ 2025 ರ ತನಕ ನಡೆಸಿದ ಕಾರ್ಯಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸಲಾಗುತ್ತದೆ. ಮನೆ-ಮನೆ ತ್ಯಾಜ್ಯ ಸಂಗ್ರಹ, ಬಳಕೆದಾರರ ಶುಲ್ಕ ಸಂಗ್ರಹ, ಮಿನಿ ಎಂ ಸಿ ಎಫ್ ಗಳು, ಸಾರ್ವಜನಿಕ ಕಸದ ತೊಟ್ಟಿಗಳು ಬಾಟಲ್ ಬೂತ್‍ಗಳ ಸಂಖ್ಯೆ ಮೊದಲಾದವುಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ.
ಹಸಿರು ಕ್ರಿಯಾ ಸೇನೆಯ ಸಂಖ್ಯೆ ಮತ್ತು ಹಸಿರುಮಿತ್ರದ ಮೂಲಕ ಸಂಗ್ರಹಿಸುವ ತ್ಯಾಜ್ಯದ ಪ್ರಮಾಣವನ್ನು ನಿರ್ಣಯಿಸುವ ಮೂಲಕ ವಾರ್ಡ್ ಮಟ್ಟದ ಹಸಿರು ಘೋಷಣೆಗಳನ್ನು ಮಾಡಲಾಗುತ್ತದೆ. ಹಸಿರು ನೆರೆಹೊರೆ ಗುಂಪುಗಳು, ಹಸಿರು ಸಂಸ್ಥೆಗಳು, ಹಸಿರು ಶಾಲೆಗಳು, ಹಸಿರು ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಪಟ್ಟಣಗಳು ಮತ್ತು ಪ್ರವಾಸಿ ತಾಣಗಳ ಘೋಷಣೆಗಳನ್ನು ಖಚಿತಪಡಿಸಿಕೊಳ್ಳಲಾಗುವುದು. ಸ್ವಚ್ಛ ಕೇರಳ ಘೋಷಣೆಯ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಗುವುದು.
ಜೊತೆಗೆ, ಎಲ್ಲಾ ವಾರ್ಡ್‍ಗಳಲ್ಲಿ ಸ್ವಚ್ಛತಾ ಸಂದೇಶ ಮೆರವಣಿಗೆಗಳನ್ನು ನಡೆಸಲಾಗುವುದು. ಮಾರ್ಚ್ 30 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮತ್ತು ನಗರಸಭಾ ಮಟ್ಟದಲ್ಲಿ ವಿಶೇಷ ಸಭೆಗಳನ್ನು ನಡೆಸಿ ಸ್ವಚ್ಛತಾ ಘೋಷಣೆಯನ್ನು ಮಾಡಲಾಗುವುದು. ಅದೇ ದಿನ ಮುಖ್ಯಮಂತ್ರಿಗಳು ರಾಜ್ಯ ಮಟ್ಟದ ಘೋಷಣೆ ಮಾಡಲಿದ್ದಾರೆ. ಬ್ಲಾಕ್ ಮಟ್ಟದಲ್ಲಿ ಏಪ್ರಿಲ್ 3 ರಂದು ಹಾಗೂ ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ 5 ರಂದು ಘೋಷಣೆಗಳನ್ನು ಮಾಡಲಾಗುತ್ತದೆ.
ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ 593 ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸಿಬಿಎಸ್‍ಇ, ಕೇಂದ್ರೀಯ ವಿದ್ಯಾಲಯಗಳು ಸೇರಿ 656 ಶಾಲೆಗಳು ಹಸಿರು ಶಾಲೆಗಳಾಗಿವೆ. ಕಾಲೇಜುಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಸೇರಿ ಒಟ್ಟು 65 ಹಸಿರು ಕಾಲೇಜುಗಳು, ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳು ಸೇರಿದಂತೆ 2491 ಸಂಸ್ಥೆಗಳು, 12175 ನೆರೆಹೊರೆ ಗುಂಪುಗಳು ಮತ್ತು ಜಿಲ್ಲೆಯ ಹೆಚ್ಚಿನ ಪಟ್ಟಣಗಳು ಹಸಿರು ಕೇರಳದ ಭಾಗವಾಗಿವೆ. ಸುಮಾರು 200 ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಕಸದ ತೊಟ್ಟಿಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯ ಗ್ರಂಥಾಲಯಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ, ಹಸಿರು ಘೋಷಣೆ ಜಾರಿಗೊಳಿಸಲಾಗಿದೆ, ಇದು ಮಾರ್ಚ್ 30 ರಂದು ಪೂರ್ಣಗೊಳ್ಳಲಿದೆ. 12 ಪ್ರವಾಸಿ ಕೇಂದ್ರಗಳನ್ನು ಹಸಿರು ಪ್ರವಾಸೋದ್ಯಮ ಕೇಂದ್ರಗಳೆಂದು ಘೋಷಿಸಲಾಗಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿಯೂ ಎಂಸಿಎಫ್, ಮಿನಿ ಎಂಸಿಎಫ್, ಕಸದ ತೊಟ್ಟಿಗಳು ಹಾಗೂ ಬಾಟಲ್ ಬೂತ್‍ಗಳನ್ನು ಸ್ಥಾಪಿಸುವ ಮೂಲಕ ಸಂಪೂರ್ಣ ಸ್ವಚ್ಛತೆಯನ್ನು ಘೋಷಿಸಲು ಸಾಧ್ಯವಾಗಲಿದೆ ಎಂದು ಹಸಿರು ಕೇರಳ ಮಿಷನ್‍ನ ಜಿಲ್ಲಾ ಸಂಯೋಜಕ ಬಾಲಕೃಷ್ಣನ್ ಹೇಳಿದರು. ಇದರ ಜೊತೆಗೆ, ನೈರ್ಮಲ್ಯ ಕೊರತೆಯನ್ನು ನೀಗಿಸಲು ಮಾರ್ಚ್ 22 ಹಾಗೂ 23 ರಂದು ಸಾರ್ವಜನಿಕ ಸ್ವಚ್ಛತಾ ಅಭಿಯಾನ ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗುವುದು.
ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವೆಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಐವಿಒ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ.