ಬಿಜಾಪುರ: ಛತ್ತೀಸಗಢದ ಬಿಜಾಪುರ ಹಾಗೂ ಕಾಂಕೇರ್ ಜಿಲ್ಲೆಗಳಲ್ಲಿ ನಕ್ಸಲರ ವಿರುದ್ಧ ಬಿಎಸ್‌ಎಫ್ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಒಟ್ಟು 30 ನಕ್ಸಲರು ಮೃತಪಟ್ಟಿದ್ದಾರೆ.
ಬಿಜಾಪುರದಲ್ಲಿ 26 ಹಾಗೂ ಕಾಂಕೇರ್‌ನಲ್ಲಿ ನಾಲ್ವರು ನಕ್ಸರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.
'ದಾಂತೇವಾಡ-ಬಿಜಾಪುರ ಜಿಲ್ಲಾ ಗಡಿ ಹಾಗೂ ಕಾಂಕೇರ್-ನಾರಾಯಣಪುರ ಜಿಲ್ಲೆಗಳ ಗಡಿಗಳ ಅರಣ್ಯ ಪ್ರದೇಶಗಳಲ್ಲಿ ಬಿಎಸ್‌ಎಫ್ ಹಾಗೂ ಡಿಆರ್‌ಜಿ ಪಡೆಗಳು ಮುಂಜಾನೆಯಿಂದಲೇ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದವು. ಬೆಳಿಗ್ಗೆ 7 ಗಂಟೆ ಸುಮಾರಿಗೆ ನಕ್ಸಲರು ಹಾಗೂ ಈ ಪಡೆಗಳ ಮಧ್ಯೆ ಗುಂಡಿನ ಚಕಮಕಿ ಏರ್ಪಟಿತ್ತು' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
'ಬಿಜಾಪುರದಲ್ಲಿ ಎನ್‌ಕೌಂಟರ್ ನಡೆದ ಸ್ಥಳದಿಂದ ನಕ್ಸಲರ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಂಕೇರ್‌ನಲ್ಲಿ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಗಗಳಲ್ಲಿ ಪಡೆಗಳು ಇನ್ನಷ್ಟು ಶೋಧಕಾರ್ಯ ನಡೆಸುತ್ತಿವೆ' ಎಂದು ವಿವರಿಸಿದರು. 2025ರ ಆರಂಭದಿಂದ ಇಲ್ಲಿಯವರೆಗೆ ಬಿಜಾಪುರ ಹಾಗೂ ಕಾಂಕೇರ್ ಜಿಲ್ಲೆಗಳನ್ನು ಸೇರಿ ಬಸ್ತಾರ್ ವಿಭಾಗದಲ್ಲಿ 100ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಲಾಗಿದೆ.