ನ್ಯೂಯಾರ್ಕ್: 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಒಪ್ಪಿಕೊಂಡಿದ್ದು, ಮುಂದಿನದ್ದು ರಷ್ಯಾಕ್ಕೆ ಬಿಟ್ಟ ವಿಚಾರ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕದಾನ ವಿರಾಮ ಒಪ್ಪಂದಕ್ಕೆ ರಷ್ಯಾ ಒಪ್ಪಿಗೆ ಸೂಚಿಸುವ ನಿರೀಕ್ಷೆಯಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಉಕ್ರೇನ್ ಮತ್ತು ಅಮೆರಿಕ, ಸೌದಿ ಅರೇಬಿಯಾ ಜೆಡ್ಡಾದಲ್ಲಿ ಮಂಗಳವಾರ ಮಾತುಕತೆ ನಡೆಸಿವೆ. ಈ ವೇಳೆ ಅಮೆರಿಕದ ಪ್ರಸ್ತಾಪಗಳನ್ನು ಒಪ್ಪಿಕೊಂಡಿರುವ ಉಕ್ರೇನ್, 30 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ.
'ಇದೀಗ ಸ್ವಲ್ಪ ಸಮಯದ ಹಿಂದೆ, ಉಕ್ರೇನ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಸಹ ಅದನ್ನು ಒಪ್ಪುತ್ತಾರೆ ಎಂಬ ನಿರೀಕ್ಷೆಯಿದೆ' ಎಂದು ಜೆಡ್ಡಾ ಘೋಷಣೆ ಬೆನ್ನಲ್ಲೇ ಟ್ರಂಪ್ ಹೇಳಿದ್ದಾರೆ.
'ಕದನ ವಿರಾಮವನ್ನು ರಷ್ಯಾ ಒಪ್ಪುವಂತೆ ಮಾಡಲು ನಮಗೆ ಸಾಧ್ಯವಾದರೆ ಉತ್ತಮ. ಸಾಧ್ಯವಾಗದೇ ಹೋದಲ್ಲಿ ಈಗಿರುವ ಪರಿಸ್ಥಿತಿ ಮುಂದುವರಿಯುತ್ತದೆ ಮತ್ತು ಜನರು ಸಾಯುತ್ತಲೇ ಇರುತ್ತಾರೆ' ಎಂದು ಸಾಮಾಜಿಕ ಮಾಧ್ಯಮ ಟ್ರುತ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.
ಸದ್ಯದಲ್ಲೇ ನಮ್ಮ ವಿಶೇಷ ರಾಯಭಾರಿ ಸ್ಟೀವ್ ವಿಟ್‌ಕಾಫ್ ಅವರು ರಷ್ಯಾಕ್ಕೆ ಭೇಟಿ ನೀಡಲಿದ್ದು, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದೂ ಟ್ರಂಪ್ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ವಿಚಾರವಾಗಿ ರಷ್ಯಾವನ್ನು ಮನವೊಲಿಸಲು ಅಮೆರಿಕ ಸಫಲವಾಗುತ್ತದೆ ಎಂಬ ಆಶಾವಾದವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವ್ಯಕ್ತಪಡಿಸಿದ್ದಾರೆ.
ನಿರ್ಧಾರ ಈಗ ರಷ್ಯಾ ಅಂಗಳದಲ್ಲಿ
ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಉಕ್ರೇನ್ ಮೊದಲ ಹೆಜ್ಜೆ ಇರಿಸಿದೆ. 30 ದಿನಗಳ ಕದನ ವಿರಾಮಕ್ಕೆ ಉಕ್ರೇನ್ ಒಪ್ಪಿಗೆ ನೀಡಿದೆ.
ಕದನ ವಿರಾಮಕ್ಕೆ ರಷ್ಯಾದ ಪ್ರತಿಕ್ರಿಯೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಒಪ್ಪಂದಕ್ಕೆ ರಷ್ಯಾ ಒಪ್ಪಿಕೊಳ್ಳಬೇಕು ಎಂದು ಅಮೆರಿಕವೂ ಸೇರಿದಂತೆ ಐರೋಪ್ಯ ಒಕ್ಕೂಟದ ಹಲವು ದೇಶಗಳು ಒತ್ತಡ ಹೇರುತ್ತಿವೆ.
'ಸೌದಿ ಅರೇಬಿಯಾದಲ್ಲಿ ನಡೆದ ಉಕ್ರೇನ್ ಮತ್ತು ಅಮೆರಿಕದ ಅಧಿಕಾರಿಗಳ ಸಭೆಯ ಬಗ್ಗೆ ಅಮೆರಿಕದ ವಿವರಣೆಯನ್ನು ಕಾಯುತ್ತಿದ್ದೇವೆ' ಎಂದು ರಷ್ಯಾ ಹೇಳಿದೆ. ಉಕ್ರೇನ್‌ಗೆ ನೀಡುತ್ತಿದ್ದ ಸೇನಾ ನೆರವನ್ನು ಕೆಲವು ದಿನಗಳ ಹಿಂದೆ ಅಮೆರಿಕ ಸ್ಥಗಿತಗೊಳಿಸಿತ್ತು. ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ಅಮೆರಿಕವು ಈ ನಿರ್ಧಾರವನ್ನು ವಾಪಸು ಪಡೆದಿದೆ.
ಐರೋಪ್ಯ ಒಕ್ಕೂಟ ಸ್ವಾಗತ
30 ದಿನಗಳ ಕದನ ವಿರಾಮ ಪ್ರಸ್ತಾವನ್ನು ಒಪ್ಪಿಕೊಂಡಿರುವ ಉಕ್ರೇನ್‌ನ ನಿರ್ಧಾರವನ್ನು ಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಐರೋಪ್ಯ ಒಕ್ಕೂಟಗಳ ಹಲವು ದೇಶಗಳು ಸ್ವಾಗತಿಸಿವೆ. 'ರಷ್ಯಾವು ಶಾಂತಿ ಬಯಸುತ್ತದೆಯೊ ಇಲ್ಲವೊ ಎಂಬುದು ಈಗ ರಷ್ಯಾಗೆ ಬಿಟ್ಟಿದ್ದು' ಎಂದು ಈ ದೇಶಗಳು ಪ್ರತಿಕ್ರಿಯಿಸಿವೆ.