ಅಡಿಸ್ ಅಬಾಬಾ: ಕಳೆದ ಒಂದು ತಿಂಗಳಿನಲ್ಲಿ ಇಥಿಯೋಪಿಯಾದ ಗ್ಯಾಂಬೆಲ್ಲಾ ಪ್ರದೇಶದಲ್ಲಿ 1,500ಕ್ಕೂ ಹೆಚ್ಚು ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, ಕನಿಷ್ಠ 31 ಜನ ಸಾವಿಗೀಡಾಗಿದ್ದಾರೆ ಎಂದು ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ಶುಕ್ರವಾರ ಹೇಳಿದೆ.
ನೆರೆಯ ದಕ್ಷಿಣ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಜನರು ಪಲಾಯನ ಮಾಡುತ್ತಿದ್ದು, ಇದರಿಂದ ಪರಿಸ್ಥಿತಿ ಹದಗೆಟ್ಟಿದೆ.
ಈ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತಿದೆ ಎಂದು ಎಂಎಸ್‌ಎಫ್ ಹೇಳಿದೆ.
ಪಶ್ಚಿಮ ಇಥಿಯೋಪಿಯಾದಾದ್ಯಂತ ಕಾಲರಾ ಸೋಂಕು ವೇಗವಾಗಿ ಹರಡುತ್ತಿದೆ. ಇದೇ ವೇಳೆ ದಕ್ಷಿಣ ಸುಡಾನ್‌ನಲ್ಲಿಯೂ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಾವಿರಾರು ಜೀವಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಎಂಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಸುಮಾರು 120 ಮಿಲಿಯನ್ ಜನರನ್ನು ಹೊಂದಿರುವ ಇಥಿಯೋಪಿಯಾದ ಹಲವಾರು ಪ್ರದೇಶಗಳಲ್ಲಿ ಜನರು ಕಾಲರಾ ಸಾಂಕ್ರಾಮಿಕದಿಂದ ಬಳಲುತ್ತಿದ್ದಾರೆ. ದಕ್ಷಿಣ ಸುಡಾನ್‌ನ ಅಕೋಬೊ ಕೌಂಟಿಯಲ್ಲಿ, ಅಪ್ಪರ್ ನೈಲ್ ಪ್ರದೇಶದಲ್ಲಿ, ಕಳೆದ ನಾಲ್ಕು ವಾರಗಳಲ್ಲಿ 1,300 ಕಾಲರಾ ಪ್ರಕರಣಗಳು ವರದಿಯಾಗಿವೆ ಎಂದೂ ಎಂಎಸ್‌ಎಫ್ ಹೇಳಿದೆ.
ಕಾಲರಾ ಕಲುಷಿತ ನೀರಿನಿಂದ ಹರಡುತ್ತದೆ. ವಾಂತಿ, ಬೇದಿ, ನಿರ್ಜಲೀಕರಣ ಅದರ ಮುಖ್ಯ ಲಕ್ಷಣವಾಗಿದೆ.