ನವದೆಹಲಿ: 2026ರ ಪದ್ಮ ಪುರಸ್ಕಾರಗಳಿಗೆ ಜುಲೈ 31ವರೆಗೆ ಆನ್‌ಲೈನ್ ಮೂಲಕ ನಾಮನಿರ್ದೇಶನ ಮತ್ತು ಶಿಫಾರಸು ಮಾಡಬಹುದು ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ಸಾರ್ವಜನಿಕರು ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ (https://awards.gov.in ).ಮೂಲಕ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀಗೆ ಆಯ್ಕೆಯಾದವರ ಹೆಸರುಗಳನ್ನು ಗಣರಾಜ್ಯೋತ್ಸವದ ಮುನ್ನಾ ದಿನದಂದು ಘೋಷಿಸಲಾಗುತ್ತದೆ.
ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆ ಮತ್ತು ಸೇವೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಜನಾಂಗ, ವೃತ್ತಿ, ಸ್ಥಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ನಾಗರಿಕರು ನಾಮನಿರ್ದೇಶನ ಮಾಡಬಹುದು ಅಥವಾ ಯಾವುದೇ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಬಹುದು. ಆದರೆ, ಅಗತ್ಯವಿರುವ ಎಲ್ಲ ವಿವರಗಳಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.
ಈ ಕುರಿತಾದ ವಿವರಗಳು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://mha.gov.in) ಮತ್ತು ಪದ್ಮ ಪ್ರಶಸ್ತಿಗಳ ಪೋರ್ಟಲ್‌ನಲ್ಲಿ (https://padmaawards.gov.in) 'Awards and Medals' ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ.
ಅಲ್ಲದೇ ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ನಿಯಮಗಳು https://padmaawards.gov.in/AboutAwards.aspx ಲಿಂಕ್‌ನೊಂದಿಗೆ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.