ಬಿಲಾಸ್‌ಪುರ: ಛತ್ತೀಸಗಢದಲ್ಲಿ ವಿದ್ಯುತ್, ಇಂಧನ, ರೈಲು, ರಸ್ತೆ, ಶಿಕ್ಷಣ, ವಸತಿ ಮುಂತಾದ ಕ್ಷೇತ್ರಗಳನ್ನು ಒಳಗೊಂಡಂತೆ ₹33,700 ಕೋಟಿಗೂ ಅಧಿಕ ಮೊತ್ತದ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಬಿಲಾಸ್‌ಪುರದಲ್ಲಿ ನಡೆದ ಸಮಾರಂಭದಲ್ಲಿ ಅಭನ್‌ಪುರ-ರಾಯ್‌ಪುರ ರೈಲು ವಿಭಾಗದಲ್ಲಿ ಮೆಮು ರೈಲು ಸೇವೆಗೆ ಚಾಲನೆ ಮೋದಿ ಅವರು ಚಾಲನೆ ನೀಡಿದ್ದಾರೆ.
ಬಿಲಾಸ್‌ಪುರದಲ್ಲಿ ₹9,790 ಕೋಟಿಗೂ ಅಧಿಕ ಮೌಲ್ಯದ ಎನ್‌ಟಿಪಿಸಿಯ ಸಿಪತ್ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ ಮೂರನೇ ಹಂತಕ್ಕೆ (1x800MW) ಮೋದಿ ಅಡಿಪಾಯ ಹಾಕಿದ್ದಾರೆ. ಜತೆಗೆ, ಪಶ್ಚಿಮ ಪ್ರದೇಶ ವಿಸ್ತರಣಾ ಯೋಜನೆ (WRES) ಅಡಿಯಲ್ಲಿ ₹560 ಕೋಟಿಗೂ ಅಧಿಕ ಮೊತ್ತದ ಮೂರು ವಿದ್ಯುತ್ ಪ್ರಸರಣ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಸೂರಜ್‌ಪುರ, ಬಲರಾಂಪುರ್ ಮತ್ತು ಸುರ್ಗುಜಾ ಜಿಲ್ಲೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್) ನಗರ ಅನಿಲ ವಿತರಣಾ (ಸಿಜಿಡಿ) ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಇದೇ ವೇಳೆ 540 ಕಿ.ಮೀ ಉದ್ದದ ₹2210 ಕೋಟಿಗೂ ಅಧಿಕ ಮೊತ್ತದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಎಚ್‌ಪಿಸಿಎಲ್) ವಿಶಾಖ-ರಾಯ್‌ಪುರ ಪೈಪ್‌ಲೈನ್ (ವಿಆರ್‌ಪಿಎಲ್) ಯೋಜನೆಗೂ ಮೋದಿ ಚಾಲನೆ ನೀಡಿದ್ದಾರೆ. .
ರಾಜ್ಯದ 29 ಜಿಲ್ಲೆಗಳಾದ್ಯಂತ 130 ಪಿಎಂಶ್ರೀ ಶಾಲೆಗಳು ಮತ್ತು ರಾಯ್‌ಪುರದಲ್ಲಿರುವ ವಿದ್ಯಾ ಸಮಿಕ್ಷಾ ಕೇಂದ್ರವನ್ನು (ವಿಎಸ್‌ಕೆ) ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಇದೇ ವೇಳೆ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.