ನವದೆಹಲಿ: 2021ರಿಂದ 2025ರ ನಡುವೆ ಕೇರಳದಾದ್ಯಂತ ಮಾನವ-ಪ್ರಾಣಿ ಸಂಘರ್ಷದಲ್ಲಿ ಅಂದಾಜು 344 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ರಾಜ್ಯಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಹಾವು ಕಡಿತಕ್ಕೆ 180, ಆನೆ ದಾಳಿಗೆ 103 ಮತ್ತು ಕಾಡು ಹಂದಿ ದಾಳಿಗೆ 35 ಜನರ ಮೃತಪಟ್ಟಿದ್ದಾರೆ.
ಇದಲ್ಲದೇ ನಾಲ್ವರು ಹುಲಿ ದಾಳಿಗೆ ಬಲಿಯಾಗಿದ್ದಾರೆ' ಎಂದರು.
'ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಮಾನವನ ಜೀವನ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ' ಎಂದು ಹೇಳಿದರು.
'ಮಾನವ ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಕೊಯಮತ್ತೂರಿನಲ್ಲಿರುವ ಎಸ್‌ಎಸಿಒಎನ್(SACON) ಕೇಂದ್ರವನ್ನು ಮಾನವ-ಪ್ರಾಣಿ ಸಂಘರ್ಷದ ವೈಜ್ಞಾನಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯತ್ನಿಸುತ್ತಿದ್ದೇವೆ. ಆನೆ ಕಾರಿಡಾರ್‌ಗಳನ್ನು ಗುರುತಿಸುವುದು ಮತ್ತು ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ತಿಳಿಸಿದರು.
'ಕಾಡು ಹಂದಿಗಳ ಹಾವಳಿಯನ್ನು ತಡೆಯಲು ಪಂಚಾಯತ್‌ಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ' ಎಂದು ಯಾದವ್ ಹೇಳಿದರು.