ಸಪ್ರೊನೊವೊ: ಮಾಸ್ಕೊದ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ಮುಂಜಾನೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಮೂರು ವರ್ಷಗಳ ಸಂಘರ್ಷದಲ್ಲಿ, ರಷ್ಯಾದ ರಾಜಧಾನಿಯ ಮೇಲೆ ನಡೆದ ಅತಿ ದೊಡ್ಡ ದಾಳಿ ಇದು ಎಂದು ಎರಡೂ ಕಡೆಯವರು ಹೇಳಿದ್ದಾರೆ.
ಮಾಸ್ಕೊ ಸುತ್ತಮುತ್ತಲಿನ ಪ್ರದೇಶದಲ್ಲಿ 337 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ತಿಳಿಸಿದೆ.
ಅಮೆರಿಕ ಮತ್ತು ಉಕ್ರೇನ್‌ನ ಅಧಿಕಾರಿಗಳು ಸೌದಿ ಅರೇಬಿಯಾದಲ್ಲಿ ಮಾತುಕತೆ ಆರಂಭಿಸುವ ಕೆಲ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ಉಕ್ರೇನ್ ಮೇಲೆ ನಡೆಸುತ್ತಿರುವ ವೈಮಾನಿಕ ದಾಳಿ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹಾಕಲು ಈ ದಾಳಿ ನಡೆಸಲಾಗಿದೆ ಎಂದು ಕೀವ್ ತಿಳಿಸಿದೆ. ಉಕ್ರೇನ್‌ನ ಈ ಪ್ರಸ್ತಾವವನ್ನು ರಷ್ಯಾ ಈ ಹಿಂದೆಯೇ ತಳ್ಳಿಹಾಕಿದೆ.
ರಷ್ಯಾ ಸೇನೆ ಸಹ ಉಕ್ರೇನ್ ಮೇಲೆ ಕ್ಷಿಪಣಿ, ಡ್ರೋನ್ ಹಾಗೂ ಬಾಂಬ್ ದಾಳಿ ನಡೆಸಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ವಸಾಹತು ಮರುವಶ
ಮಾಸ್ಕೊ (ರಾಯಿಟರ್ಸ್): ರಷ್ಯಾದ ಪಶ್ಚಿಮದಲ್ಲಿರುವ ಕರ್ಸ್ಕ್ ಪ್ರದೇಶದಿಂದ ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸಿ ತನ್ನ ಭೂಭಾಗದ ಮರುವಶಕ್ಕೆ ರಷ್ಯಾ ಸೇನೆ ಮುಂದಾಗಿದೆ. ಕರ್ಸ್ಕ್‌ನ 100 ಚದರ ಕಿ.ಮೀ ಪ್ರದೇಶ ಹಾಗೂ 12 ವಸಾಹತುಗಳನ್ನು ಉಕ್ರೇನ್ ಸೇನೆಯಿಂದ ಮರುವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾ ತಿಳಿಸಿದೆ.