ಮವದೆಹಲಿ: ಜಗತ್ತಿನ ಶೇ 40ರಷ್ಟು ಜನರಿಗೆ, ತಮಗೆ ಅರ್ಥವಾಗುವ ಅಥವಾ ಮಾತನಾಡುವ ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿಲ್ಲ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ಮೇಲ್ವಿಚಾರಣೆ ತಂಡವು (ಜಿಇಎಂ) ತಿಳಿಸಿದೆ.
ಶಿಕ್ಷಣದಲ್ಲಿ ಮಾತೃಭಾಷೆಯ ಪಾತ್ರದ ಬಗ್ಗೆ ಹಲವು ದೇಶಗಳಲ್ಲಿ ಜಾಗೃತಿ ಹೆಚ್ಚುತ್ತಿದ್ದರೂ ಈ ನೀತಿ ಅಳವಡಿಕೆ ಪ್ರಮಾಣವು ಸೀಮಿತವಾಗಿದೆ.
ಮಾತೃಭಾಷೆಗಳನ್ನು ಬಳಸುವ ಶಿಕ್ಷಕರ ಸಾಮರ್ಥ್ಯ ಸೀಮಿತವಾಗಿರುವುದು, ಪಠ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಅಭಾವ, ಸಮುದಾಯದ ವಿರೋಧ ಸೇರಿದಂತೆ ಹಲವು ಸಮಸ್ಯೆಗಳು ಮಾತೃಭಾಷೆ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸವಾಲಾಗಿವೆ ಎಂದು ಅದು ಅಭಿಪ್ರಾಯಪಟ್ಟಿದೆ.
ಕಡಿಮೆ ಮತ್ತು ಮಧ್ಯಮ ಆದಾಯ ಇರುವ ಕೆಲವು ದೇಶಗಳಲ್ಲಿ ಈ ಸಮಸ್ಯೆಯು ಶೇ 90ರಷ್ಟಿದೆ. ಎಲ್ಲ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಶೈಕ್ಷಣಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಗುರಿಯೊಂದಿಗೆ ಬಹುಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಶಿಫಾರಸು ಮಾಡಲಾಗುತ್ತಿದೆ ಎಂದು ಜಿಇಎಂ ಅಧಿಕಾರಿಗಳು ತಿಳಿಸಿದರು.
ತಂಡವು ತನ್ನ 'ಲಾಗ್ವೇಜಸ್ ಮ್ಯಾಟರ್ಸ್: ಗ್ಲೋಬಲ್ ಗೈಡೆನ್ಸ್ ಆನ್ ಮಲ್ಟಿಲಿಂಗುವಲ್ ಎಜುಕೇಶನ್' ವರದಿಯಲ್ಲಿ, ಸ್ಥಳಾಂತರಗೊಂಡ 3.1 ಕೋಟಿ ಯುವಜನರ ಶಿಕ್ಷಣಕ್ಕೆ ಭಾಷೆಯು ಅಡ್ಡಿಯಾಗಿದೆ ಎಂದು ತಿಳಿಸಿದೆ.
ಭಾರತದಲ್ಲಿ ಬಹುಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅನುಷ್ಠಾನ ಪ್ರಕ್ರಿಯೆ ಚಾಲ್ತಿಯಲ್ಲಿ ಇರುವಾಗಲೇ ಈ ವರದಿ ಬಂದಿದೆ. ಶಿಕ್ಷಣದಲ್ಲಿ ಮೂರು ಭಾಷೆಗಳ ಅಳವಡಿಕೆಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ.