ಕೋಲ್ಕತ್ತಾ :ಇತ್ತೀಚಿಗೆ ಹಲವು ರೀತಿಯ ಹೊಸ ಹೊಸ ವೈರಸ್‌ಗಳು ಕಾಣಿಸಿಕೊಳ್ಳುವುದು ನೋಡುತ್ತಿದ್ದೇವೆ. ಹಾಗೆ ಈಗ ಮಾನವರು ಹಾಗೂ ಪ್ರಾಣಿಗಳ ಮೇಲೆ ಪ್ರಭಾವ ಬೀರುವಂತಹ HKU1 (HCoV-HKU1) ಹೆಸರಿನ ಕೊರೊನಾ ವೈರಸ್ ಕೂಡ ಕಾಣಿಸಿಕೊಂಡಿರುವುದು ಆತಂಕ ಹುಟ್ಟಿಸಿದೆ. ಈಗ ಈ ವೈರಸ್‌ನ ಪ್ರಕರಣ ಕೋಲ್ಕತ್ತಾದಲ್ಲಿ ವರದಿಯಾಗಿದೆ.
ಕೋಲ್ಕತ್ತಾದ 49 ವರ್ಷದ ಮಹಿಳೆಯೊಬ್ಬರು ಮಾನವ ಕೊರೊನಾ ವೈರಸ್ HKU1 ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. 15 ದಿನಗಳಿಂದ ನಿರಂತರ ಜ್ವರಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಈ ಸೋಂಕು ಇರುವು ವರದಿಯಾಗಿದೆ. ಹಾಗೆ ಅವರು ಕಳೆದ 30 ದಿನಗಳಿಂದ ಮನೆಯಿಂದ ಎಲ್ಲಿಗೂ ಪ್ರಯಾಣ ಕೂಡ ಬೆಳೆಸಿಲ್ಲ ಎಂದು ತಿಳಿದುಬಂದಿದೆ.
ಕೋಲ್ಕತ್ತಾದ ಆರ್‌ಎನ್ ಟ್ಯಾಗೋರ್ ಆಸ್ಪತ್ರೆಯಲ್ಲಿ ಆಕೆ ದಾಖಲಾಗಿದ್ದು, ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿದುಬಂದಿದೆ. ಆರಂಭಿಕ ಪರೀಕ್ಷೆಯಲ್ಲಿ ಆಕೆಗೆ ದ್ವಿತೀಯಕ ನ್ಯುಮೋನಿಯಾ ಪತ್ತೆಯಾಗಿತ್ತು. ಅವರು ಕಳೆದ 15 ದಿನಗಳಿಂದ ತೀವ್ರ ಜ್ವರ ಅನುಭವಿಸುತ್ತಿದ್ದರು. ರೋಗಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಹಾಗೆ ಅವರ ವೈರಸ್ SARS-CoV-2 ಗೆ ಸಂಬಂಧಿಸಿದ್ದಲ್ಲ, ಆದರೆ ಇದು ಕೊರೊನಾ ವೈರಸ್‌ನ ಮತ್ತೊಂದು ತಳಿ HKU-1 ಎಂದು ತಿಳಿದುಬಂದಿದೆ.
ಸದ್ಯ ವೈರಸ್ ಪತ್ತೆಯಾಗಿದ್ದ ಮಹಿಳೆಗೆ ಹೆಚ್ಚಿನ ಪ್ರತಿರೋಧಕ ನೀಡಲಾಗಿದ್ದು ನಾಳೆ ಸಂಜೆಯ ಒಳಗೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಈ ವೈರಸ್ ದಶಕಗಳಿಂದಲೂ ಇದ್ದು ಇದರ ಹರಡುವಿಕೆ ಪ್ರಮಾಣ ಕಡಿಮೆ ಹಾಗೂ ಅಪಾಯವೂ ಕಡಿಮೆ ಎಂದು ತಿಳಿದುಬಂದಿದೆ.
ಮಾನವ ಕೊರೊನಾ ವೈರಸ್ ಎಂದರೇನು?
ಸಾಮಾನ್ಯವಾಗಿ ಮಾನವ ಕೊರೊನಾ ವೃರಸ್ HKU1 (HCoV-HKU1) ಎಂದು ಕರೆಯಲ್ಪಡುವ ಬೀಟಾ ಕೊರೊನಾವೈರಸ್ ಹಾಂಗ್‌ಕೋನೆನ್ಸ್ ಆಗಿದೆ. ಇದು ಕೊರೊನಾ ವೈರಸ್‌ನ ಕುಟುಂಬಕ್ಕೆ ಸೇರಿದೆ. ಆದ್ರೆ ಈ ಹಿಂದೆ ಸಾಂಕ್ರಾಮಿಕಕ್ಕೆ ಕಾರಣವಾಗಿದ್ದಷ್ಟು ಅಪಾಯಕಾರಿಯಲ್ಲ ಎಂದು ತಿಳಿದುಬಂದಿದೆ. ಇದು ಮಾನವರು ಮಾತ್ರವಲ್ಲ ಪ್ರಾಣಿಗಳಿಗೂ ಹರಡುತ್ತದೆ.
ಇದನ್ನು 2004ರಲ್ಲೇ ಪತ್ತೆ ಮಾಡಲಾಗಿದ್ದ ವೈರಸ್ ಆಗಿದೆ. ಮೊದಲ ಬಾರಿಗೆ ಹಾಂಗ್ ಕಾಂಗ್‌ನಲ್ಲಿ ಪತ್ತೆಯಾದ ಹಿನ್ನೆಲೆ ಇದಕ್ಕೆ HKU1 ಎಂದು ಹೆಸರಿಡಲಾಗಿತ್ತು. ಇದು ಕೊರೊನಾ ವೈರಸ್‌ಗೆ ಸೇರಿರುವ ಹಲವು ವೈರಸ್‌ಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಶೀತ ಹಾಗೂ ಜ್ವರಕ್ಕೆ ಕಾರಣವಾಗುವ ಒಂದು ವೈರಸ್ ಎಂದು ವರ್ಗೀಕರಿಸಲಾಗಿದೆ.
ಈ ವೈರಸ್‌ನ ಲಕ್ಷಣಗಳೇನು?
ಸಾಮಾನ್ಯವಾಗಿ ಈ ವೈರಸ್ ಕೂಡ ಮಕ್ಕಳಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣಿಸಲಿದೆ. ಇದು ಸಾಮಾನ್ಯವಾಗಿ ಸಣ್ಣ ಮಟ್ಟದ ಜ್ವರ, ಶೀತ, ನ್ಯುಮೋನಿಯಾದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಈ ವೈರಸ್‌ಗೆ ಒಳಗಾಗಿದ್ದ ಮೊದಲ ಪ್ರಕರಣವು ಹಾಂಗ್‌ಕಾಂಗ್‌ನಲ್ಲಿ ವರದಿಯಾಗಿತ್ತು. ಆ ವ್ಯಕ್ತಿಯಲ್ಲಿಯೂ ಕೂಡ ಜ್ವರ, ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದಿತ್ತು.
HCoV-HKU1 SARS ಮತ್ತು MERS ವೈರಸ್‌ಗಿಂತ ಕಡಿಮೆ ಪ್ರಮಾಣದ ಪ್ರಭಾವ ಉಂಟು ಮಾಡಲಿದೆ. ಹೆಚ್ಚಿನವರಲ್ಲಿ ಶೀತ, ಗಂಟಲು ನೋವು, ತಲೆ ನೋವು, ಜ್ವರ ಇರಲಿದೆ. ಈ ಎಲ್ಲಾ ಲಕ್ಷಣಗಳು ಸೌಮ್ಯ ಪ್ರಮಾಣದಲ್ಲಿರಲಿವೆ. ಶಿಶುಗಳು ಹಾಗೂ ಹಿರಿಯ ನಾಗರೀಕರಲ್ಲಿ ಇದರ ಪ್ರಭಾವ ತೀಕ್ಷ್ಣವಾಗುವ ಲಕ್ಷಣವೂ ಇದೆ ಎಂದು ತಿಳಿದುಬಂದಿದೆ.
ಹಾಗೆ ಈ ವೈರಸ್ ಮಧುಮೇಹ ರೋಗಿಗಳು, ಕ್ಯಾನ್ಸರ್ ರೋಗಿಗಳು ಮತ್ತು ಶ್ವಾಸಕೋಶದ ಕಾಯಿಲೆ, ಉಸಿರಾಟ ಸಮಸ್ಯೆ ಹೊಂದಿರುವವರಲ್ಲಿ ತೀವ್ರ ಸಮಸ್ಯೆ ತರಬಹುದು. ಹಾಗೆ ಇದು ಕೆಮ್ಮುವುದು, ಸೀನುವುದರಿಂದ ಹರಡುವಿಕೆಗೆ ಕಾರಣವಾಗುತ್ತದೆ ಎಂದು ವರದಿಯಾಗಿದೆ. ಇದಕ್ಕೆ ಚಿಕಿತ್ಸೆಯೂ ಕೂಡ ಸಾಮಾನ್ಯ ಜ್ವರದಂತೆ, ಹಾಗೆ ರೋಗ ನಿರೋಧಕ ಶಕ್ತಿ ಉತ್ತೇಜಿಸುವ ಕ್ರಮ ತೆಗೆದುಕೊಳ್ಳುವುದಾಗಿದೆ.