ನವದೆಹಲಿ: ಪಿಎಂ-ಕಿಸಾನ್ ಯೋಜನೆಯಡಿ ಅರ್ಹತೆ ಇಲ್ಲದವರಿಗೆ ವಿತರಿಸಿದ್ದ ₹416 ಕೋಟಿ ಪ್ರೋತ್ಸಾಹಧನವನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ಸಂಸತ್‌ಗೆ ತಿಳಿಸಿದೆ.
2019ರಲ್ಲಿ ಈ ಯೋಜನೆ ಜಾರಿಗೊಂಡಿದ್ದು, ಇಲ್ಲಿಯವರೆಗೆ 19 ಕಂತುಗಳಲ್ಲಿ ₹3.68 ಲಕ್ಷ ಕೋಟಿಯನ್ನು ರೈತರಿಗೆ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ವಾರ್ಷಿಕ ₹6 ಸಾವಿರ ಮೊತ್ತವನ್ನು ಮೂರು ಕಂತಿನಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ನಿಯಮಾವಳಿ ಪಾಲಿಸದವರಿಗೆ ಸೌಲಭ್ಯವನ್ನು ಸ್ಥಗಿತಗೊಳಿಸಲಾ ಗಿದೆ ಎಂದು ತಿಳಿಸಿದ್ದಾರೆ.
ಅರ್ಹರ ಭೂ ದಾಖಲೆ ಮತ್ತು ಆಧಾರ್ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಈ ನಿಯಮ ಪಾಲನೆ ಮಾಡದವರಿಗೆ ಹಣ ಜಮೆ ಮಾಡಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಾಕಿ ಮೊತ್ತವು ಅವರ ಖಾತೆಗಳಿಗೆ ಜಮೆಯಾಗಲಿದೆ ಎಂದು ವಿವರಿಸಿದ್ದಾರೆ.
ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ವಲಯದ ಉದ್ದಿಮೆ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಸಾಂವಿಧಾನಿಕ ಹುದ್ದೆ ಹೊಂದಿದವರು ಈ ಸೌಲಭ್ಯಕ್ಕೆ ಅರ್ಹರಲ್ಲ. ಅಂತಹವರಿಗೆ ಪಾವತಿಸಿರುವ ಹಣವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.