ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆಯಿಂದ ಫೆ. 12ರಂದು ನಾಪತ್ತೆಯಾಗಿದ್ದ 15ರ ಹರೆಯದ ಬಾಲಕಿ ಹಾಗೂ 42ರ ಹರೆಯದ ವ್ಯಕ್ತಿಯ ಮೃತದೇಹ ಮನೆ ಸನಿಹದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೈವಳಿಕೆ ಸನಿಹದ ನಿವಾಸಿ, ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಹಾಗೂ ನೆರೆಮನೆ ನಿವಾಸಿ ಪ್ರದೀಪ್(42)ಮೃತಪಟ್ಟವರು.
ಫೆ. 12ರಂದು ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಿದ್ದರು. ಬಾಲಕಿ ನಾಪತ್ತೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ, ಪತ್ತೆಕಾರ್ಯ ಸಾಧ್ಯವಾಗದ ಹಿನ್ನೆಲೆಯಲ್ಲಿ ಬಾಲಕಿ ತಾಯಿ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಭಾನುವಾರ ಬೆಳಗ್ಗೆ ಪೆÇಲೀಸರು ಹಾಗೂ ನಾಗರಿಕರು ನಡೆಸಿದ ಹುಡುಕಾಟದಲ್ಲಿ ಮೃತದೇಹ ಕಂಡು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು.ಬಾಲಕಿಯ ಹಾಗೂ ಯುವಕನ ಮೊಬೈಲು ಫೋನುಗಳು ಮೃತದೇಹ ಕಂಡು ಬಂದ ಪರಿಸರದಿಂದ ಲಭಿಸಿದ್ದು, ಒಂದು ಕತ್ತಿಯನ್ನೂ ಪತ್ತೆಹಚ್ಚಲಾಗಿದೆ.
ಫೆಬ್ರವರಿ 11 ರಂದು ರಾತ್ರಿ ಬಾಲಕಿ ಆಹಾರ ಸೇವಿಸಿ ಮಲಗಿದ್ದು, 12ರಂದು ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದ್ದಳು. ಅದೇ ದಿನ ನೆರೆಮನೆ ನಿವಾಸಿ ಪ್ರದೀಪನೂ ನಾಪತ್ತೆಯಾಗಿರುವುದಾಗಿ ಹೆತ್ತವರು ನೀಡಿದ ದೂರಿನಲ್ಲಿ ತಿಳಿಸಿದ್ದರು.
ಪ್ರದೀಪ್ ಹಾಗೂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಯುವಕ ಬಾಲಕಿಯೊಂದಿಗಿರುವ 90ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ತನ್ನ ಸಂಬಂಧಿಕರಿಗೆ ಕಳುಹಿಸಿಕೊಟ್ಟಿದ್ದನು. ವಿವಿಧ ಸ್ಥಳಗಳಲ್ಲಿ ತೆಗೆದ ಫೊಟೋ ಇದಾಗಿದ್ದು, ಇದರಿಂದ ಇಬ್ಬರೂ ಜತೆಯಾಗಿರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದರು. ಫೋಟೋ ಕೇಂದ್ರೀಕರಿಸಿ, ಕರ್ನಾಟಕದಲ್ಲಿರುವ ಇವರ ಸಂಬಂಧಿಕರನ್ನು ಸಂಪರ್ಕಿಸಿದಾಗ ಅತ್ತ ತೆರಳಿಲ್ಲವೆಂದು ಖಚಿತಗೊಂಡ ನಂತರ ಮನೆ ಆಸುಪಾಸು ಹುಡುಕಾಟ ನಡೆಸಿದ್ದರು. ಡ್ರೋಣ್ ಬಳಸಿ ಹುಡುಕಾಟ ನಡೆಸಿದ್ದರೂ, ಇವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಪೊಲೀಸರು ಹುಡುಕಾಟ ನಡೆಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಮೃತದೇಹ ಪತ್ತೆಹಚ್ಚಲು ವಿಳಂಬವಾಗಿರುವುದಾಗಿ ನಾಗರಿಕರು ದೂರಿದ್ದಾರೆ.
ಬಾಲಕಿ ಪತ್ತೆಗಾಗಿ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ವಿನೋದ್‍ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಲಾಗಿತ್ತು.