ಇಂಫಾಲ: ಸಂಘರ್ಷ ಪೀಡಿತ ಮಣಿಪುರದ ಐದು ಜಿಲ್ಲೆಗಳಲ್ಲಿ 42 ಬಂದೂಕುಗಳನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇಂಫಾಲ ಪಶ್ಚಿಮ ಮತ್ತು ಪೂರ್ವ, ಚುರಚಂದ್‌ಪುರ , ಬಿಷ್ಣುಪುರ ಮತ್ತು ತಮೆಂಗ್‌ಲಾಂಗ್ ಜಿಲ್ಲೆಗಳಲ್ಲಿ ಶನಿವಾರ ಬಂದೂಕುಗಳನ್ನು ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ 6 ಗ್ರೆನೇಡ್‌ಗಳು ಮತ್ತು 75ಕ್ಕೂ ಹೆಚ್ಚು ಮದ್ದುಗುಂಡುಗಳು, 5 ಬಂದೂಕುಗಳನ್ನು ಒಪ್ಪಿಸಲಾಗಿದೆ. ಯೈಂಗಂಗ್‌ಪೋಕ್ಪಿ, ಪೊರೊಂಪತ್, ಚುರಚಂದ್‌ಪುರ ಮತ್ತು ಲಾಮ್ಸಾಂಗ್ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 10 ಬಂದೂಕುಗಳನ್ನು ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
5 ಅಕ್ರಮ ಬಂಕರ್‌ಗಳ ನಾಶ
ಕಾಂಗ್‌ಪೋಕ್ಪಿ ಜಿಲ್ಲೆಯ ಥಿಂಗ್‌ಸಾಟ್ ಬೆಟ್ಟ ಶ್ರೇಣಿಯ ಮಾರ್ಕ್ ಬೆಟ್ಟದಲ್ಲಿದ್ದ 2 ಅಕ್ರಮ ಬಂಕರ್ ಹಾಗೂ ಕಾಂಗ್‌ಪೋಕ್ಪಿ ಮತ್ತು ಇಂಫಾಲ ಪೂರ್ವ ಜಿಲ್ಲೆಗಳ ಪಕ್ಕದ ಪ್ರದೇಶದ ವಾಕನ್ ಬೆಟ್ಟ ಶ್ರೇಣಿಯಲ್ಲಿದ್ದ 3 ಅಕ್ರಮ ಬಂಕರ್‌ಗಳನ್ನು ಭದ್ರತಾ ಪಡೆಗಳು ಶನಿವಾರ ನಾಶಪಡಿಸಿವೆ.
ಶಸ್ತ್ರಾಸ್ತ್ರ ಒಪ್ಪಿಸಲು ಗಡುವು ವಿಸ್ತರಣೆ
ಲೂಟಿ ಮಾಡಿದ ಮತ್ತು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಫೆ. 20 ರಂದು ಸೂಚಿಸಿದ್ದರು. ಫೆ.27ರೊಳಗೆ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಿತವಾಗಿ ಒಪ್ಪಿಸುವಂತೆ ಸ್ವಯಂಸೇವಕರು ಮತ್ತು ಬಂಡುಕೋರರಿಗೆ ತಿಳಿಸಿದ್ದರು.
ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನೀಡಿದ ಗಡುವು ವಿಸ್ತರಿಸುವಂತೆ ಮೈತೇಯಿ ಮತ್ತು ಕುಕಿ ಸಮುದಾಯಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದವು. ವಿವಿಧ ಸಂಘಟನೆಗಳ ಮನವಿಯನ್ನು ಪರಿಗಣಿಸಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಮಾರ್ಚ್ 6ರವರೆಗೆ ವಿಸ್ತರಿಸಿ ಅಂತಿಮ ಅವಕಾಶ ನೀಡಿದ್ದಾರೆ.
2023ರಿಂದ ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಹಿಂಸಾಚಾರದ ವೇಳೆ ಪೊಲೀಸ್ ಠಾಣೆಗಳು ಮತ್ತು ಶಸ್ತ್ರಾಗಾರದಿಂದ 6 ಸಾವಿರಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಅದರಲ್ಲಿ ಇದುವರೆಗೆ ಸುಮಾರು ಎರಡು ಸಾವಿರ ಶಸ್ತ್ರಾಸ್ತ್ರಗಳನ್ನು ಮಾತ್ರ ಮರಳಿ ವಶಕ್ಕೆ ಪಡೆಯಲಾಗಿದೆ.