ತಿರುಪತಿ: ತಿರುಪತಿ ತಿರುಮಲ ದೇಗುಲದಲ್ಲಿ ಒಂದು ದಿನ ಅನ್ನದಾನ ಸೇವೆ ನೀಡಲು ಬಯಸುವವರಿಗೆ ಟಿಟಿಡಿ ಅವಕಾಶ ನೀಡಿದೆ. ₹44 ಲಕ್ಷ ದೇಣಿಗೆ ನೀಡಿದರೆ ಒಂದು ದಿನದ ಅನ್ನದಾನ ಸೇವೆ ಮಾಡಬಹುದಾಗಿದೆ.
ಈ ಸೇವೆಗೆ ಪಾವತಿ ಮಾಡಿಸಿದರೆ ಅನ್ನದಾನದ ದಿನ ದಾನಿಗಳೇ ಪ್ರಸಾದ ವಿತರಿಸಬಹುದಾಗಿದೆ.
ಅಲ್ಲದೆ ದಾನಿಗಳ ಹೆಸರನ್ನು ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಒಂದು ಇಡೀ ದಿನದ ಸೇವೆಯಲ್ಲಿ ಬೆಳಗ್ಗಿನ ಉಪಾಹಾರಕ್ಕೆ ₹10 ಲಕ್ಷ ಹಾಗೂ ಮಧ್ಯಾಹ್ನದ ಊಟಕ್ಕೆ ₹17 ಲಕ್ಷ ಪಾವತಿಸಬೇಕಿದೆ. ಮೂರು ಹೊತ್ತಿನ ಅನ್ನದಾನಕ್ಕೆ ₹44 ಲಕ್ಷ ಪಾವತಿಸಬೇಕಿದೆ.
ದೇವರ ದರ್ಶನಕ್ಕಾಗಿ ವಿವಿಧ ದೇಶ, ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರಿಗೆ ರುಚಿಕರವಾದ ಮತ್ತು ಆರೋಗ್ಯಕರವಾದ ಒಂದು ದಿನದ ಅನ್ನಪ್ರಸಾದವನ್ನು ಒದಗಿಸಲು ಟಿಟಿಡಿಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಒಂದು ದಿನದ ದೇಣಿಗೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಟಿಟಿಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.