ನಿಯಾಮಿ: ನೈರುತ್ಯ ನೈಗರ್‌ನಲ್ಲಿರುವ ಮಸೀದಿಯೊಂದರ ಮೇಲೆ ಇಸ್ಲಾಮಿಸ್ಟ್ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 44 ನಾಗರಿಕರು ಮೃತಪಟ್ಟಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನೈಗರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ಗಡಿ ಪ್ರದೇಶದ ಸಮೀಪದಲ್ಲಿರುವ ಫೋಂಬಿಟಾ ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ದಾಳಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಅಂಗಸಂಸ್ಥೆಯಾದ ಇಐಜಿಎಸ್ ನಡೆಸಿರುವ ಸಾಧ್ಯತೆ ಇದೆ. ಮುಸ್ಲಿಮರ ಪವಿತ್ರ ರಂಜಾನ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಗೆ ಬಂದಿದ್ದರು. ಇದೇ ವೇಳೆ ಭಾರಿ ಶಸ್ತ್ರಸಜ್ಜಿತ ಉಗ್ರರು, ಜನರನ್ನು ಸುತ್ತುವರಿದು 'ಹತ್ಯಾಕಾಂಡ' ನಡೆಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಸೀದಿ ಮೇಲೆ ದಾಳಿ ನಡೆಸಿದ ಬಳಿಕ ದಾಳಿಕೋರರು ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.