ಶ್ರೀನಗರ: ಕಠುವಾದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ನಳಿನ್ ಪ್ರಭಾತ್ ಕೂಡ ಎ.ಕೆ.-47 ಬಂದೂಕು ಹಿಡಿದು ಪಾಲ್ಗೊಂಡಿದ್ದಾರೆ.
ಹಿರಾನಗರ್ ವಲಯದಲ್ಲಿ ಅಂತರರಾಷ್ಟ್ರೀಯ ಗಡಿಯ ಬಳಿ ಸನ್ಯಾಲ್ ಗ್ರಾಮದಲ್ಲಿ ಭಾನುವಾರ ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿದಾಗ ಗುಂಡಿನ ಚಕಮಕಿ ಆರಂಭಗೊಂಡಿತ್ತು.
ಕಾರ್ಯಾಚರಣೆ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹಿರಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ದಟ್ಟ ಕಾಡಿನಲ್ಲಿ ಉಗ್ರರನ್ನು ಪತ್ತೆಹಚ್ಚಲು ಮಾನವರಹಿತ ವೈಮಾನಿಕ ವಾಹನ (ಯುಎವಿ), ಶ್ವಾನಪಡೆಗಳನ್ನು ಬಳಸಿಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಬಂದೂಕು ಹಿಡಿದು, ಕಾಡಿನಲ್ಲಿ ಉಗ್ರರ ಅಡಗುತಾಣಗಳನ್ನು ಪತ್ತೆಹಚ್ಚುತ್ತಿದ್ದಾರೆ.
'ಭದ್ರತಾ ಪಡೆಗಳು ಸುತ್ತುವರಿದ ಜಾಗದಲ್ಲಿ ಭಯೋತ್ಪಾದಕರು ಸಿಲುಕಿದ್ದಾರೆ. ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು' ಎಂದು ಡಿಜಿಪಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಮುಖ್ಯಸ್ಥರೇ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದು ಅಪರೂಪದ ಬೆಳವಣಿಗೆಯಾಗಿದ್ದು, ಭಯೋತ್ಪಾದನೆ ನಿಗ್ರಹದಲ್ಲಿ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಅಮೆರಿಕ ನಿರ್ಮಿತ ಎಂ-4 ರೈಫಲ್ ಮ್ಯಾಗಜಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಏಳು ವರ್ಷ ವಯಸ್ಸಿನ ಬಾಲಕಿಯೊಬ್ಬಳಿಗೆ ಗಾಯಗಳಾಗಿವೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.