ನವದೆಹಲಿ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ಜತೆ ಬುಧವಾರ ನಡೆದ ಮಾತುಕತೆಯಲ್ಲಿ ಯಾವುದೇ ನಿರ್ಣಯ ಹೊರಹೊಮ್ಮಲಿಲ್ಲ. ಮುಂದಿನ ಸಭೆ ಮೇ 4ಕ್ಕೆ ನಿಗದಿಪಡಿಸಲಾಗಿದೆ.
ರೈತ ನಾಯಕರ ಜತೆ ಏಳನೇ ಸುತ್ತಿನ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಸೌಹಾರ್ದಯುತ ವಾತಾವರಣದಲ್ಲಿ ಸಕಾರಾತ್ಮಕ ಚರ್ಚೆ ನಡೆದಿದ್ದು, ಮಾತುಕತೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.
ಚಂಡೀಗಢದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಶ್ ಗೋಯಲ್, ಪಂಜಾಬ್ ಹಣಕಾಸು ಸಚಿವ ಹರ್‌ಪಾಲ್ ಸಿಂಗ್ ಚೀಮಾ, ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದ್ದಿಯನ್ ಭಾಗವಹಿಸಿದ್ದರು.
ಎಂಎಸ್‌ಪಿಗೆ ಕಾನೂನು ಬೆಂಬಲ ನೀಡುವುದೂ ಸೇರಿದಂತೆ ರೈತ ನಾಯಕರು ಪ್ರಸ್ತಾಪಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) 28 ಸದಸ್ಯರ ನಿಯೋಗ ಸಭೆಯಲ್ಲಿ ಪಾಲ್ಗೊಂಡಿತ್ತು ಎಂದು ರೈತ ನಾಯಕ ಸರವಣ ಸಿಂಗ್ ಪಂಡೇರ್ ಸುದ್ದಿಗಾರರಿಗೆ ತಿಳಿಸಿದರು. ನವೆಂಬರ್ 26ರಿಂದ ಉಪವಾಸ ನಡೆಸುತ್ತಿರುವ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರು ಅಂಬುಲೆನ್ಸ್ ಮೂಲಕ, ವೈದ್ಯಕೀಯ ನೆರವಿನೊಂದಿಗೆ ಸಭೆಗೆ ಹಾಜರಾಗಿದ್ದರು.