ನವದೆಹಲಿ: ಮಧ್ಯಪ್ರದೇಶದಲ್ಲಿ ನಾಲ್ಕು ಹಕ್ಕಿ ಜ್ವರ (ಎಚ್5ಎನ್1) ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
'ಮಧ್ಯಪ್ರದೇಶದ ಛಿಂದ್ವಾರದಲ್ಲಿ ಮೂರು ಸಾಕು ಬೆಕ್ಕುಗಳು ಮತ್ತು ಮಾರುಕಟ್ಟೆಯಲ್ಲಿನ ಒಂದು ಹಕ್ಕಿಯಲ್ಲಿ ಎಚ್5ಎನ್1 ಕಾಣಿಸಿಕೊಂಡಿದೆ.
ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
ಹಕ್ಕಿ ಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಪಶುಸಂಗೋಪನಾ ಇಲಾಖೆಯ ಕ್ರಿಯಾ ಯೋಜನೆಯಲ್ಲಿ ವಿವರಿಸಿರುವಂತೆ ಅಗತ್ಯ ಕ್ರಮಗಳನ್ನು ಮತ್ತು ನಿಯಂತ್ರಣ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ರಾಜ್ಯಕ್ಕೆ ಸೂಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಮಾರುಕಟ್ಟೆಯಲ್ಲಿರುವ ಎಲ್ಲಾ ಹಕ್ಕಿಗಳನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ, ಮಾರುಕಟ್ಟೆಗೆ ನೈರ್ಮಲ್ಯೀಕರಣ (ಸ್ಯಾನಿಟೈಸೇಶನ್) ಪ್ರಮಾಣಪತ್ರ ನೀಡಿದ ದಿನಾಂಕದಿಂದ 21 ದಿನಗಳವರೆಗೆ ಮಾರುಕಟ್ಟೆಯನ್ನು ಮುಚ್ಚಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.