ನವದೆಹಲಿ: ವ್ಯಕ್ತಿಯೊಬ್ಬ ಹಾವು ಕಡಿತಕ್ಕೆ ಒಳಗಾಗಿದ್ದಾಗ, ಕಚ್ಚಿರುವುದು ವಿಷಪೂರಿತ ಹಾವೇ ಅಥವಾ ವಿಷಪೂರಿತವಲ್ಲದ ಹಾವೇ ಎನ್ನುವುದನ್ನು 4 ತಾಸುಗಳೊಳಗೆ ಪತ್ತೆ ಮಾಡುವ ಹೊಸ ವಿಧಾನವನ್ನು ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.
ಭಾರತದಲ್ಲಿ ಹಾವು ಕಡಿತಕ್ಕೆ ಸಂಬಂಧಿಸಿ, ಬಹುಪಾಲು ಅಸ್ವಸ್ಥತೆ ಮತ್ತು ಮರಣಕ್ಕೆ ಕಾರಣವಾಗುವ ಐದು ಬಗೆಯ ಹಾವುಗಳಾದ ನಾಗರಹಾವು, ಕಾಮನ್ ಕ್ರೈಟ್, ರಸೆಲ್ಸ್ ವೈಪರ್, ಸಾ-ಸ್ಕೇಲ್ಡ್ ವೈಪರ್ ಮತ್ತು ಮೊನೊಕ್ಲೆಡ್ ನಾಗರಹಾವುಗಳನ್ನು ಗುರುತಿಸಲು ಸ್ಮಾರ್ಟ್‌ಫೋನ್ ಆಧಾರಿತ ವಿಧಾನವನ್ನು ವಿಜ್ಞಾನಿಗಳು ರೂಪಿಸಿದ್ದಾರೆ.
ತೇಜ್‌ಪುರ ವಿಶ್ವವಿದ್ಯಾಲಯ ಮತ್ತು ಗುವಾಹಟಿಯ 'ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ'ಯ ಸಂಶೋಧಕರು ಅಭಿವೃದ್ಧಿಪಡಿಸಿದ ಈ ಹೊಸ ತಂತ್ರಜ್ಞಾನವು ಸಣ್ಣ ರಕ್ತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಇದು ಹಾವು ಕಡಿತಕ್ಕೆ ಒಳಗಾದವರಿಗೆ ವಿಷಕಾರಿ ಹಾವು ಕಚ್ಚಿದೆಯೇ ಎಂಬುದನ್ನು ಪತ್ತೆಹಚ್ಚುವುದಲ್ಲದೆ, ದೇಹದಲ್ಲಿ ಸೇರಿದ ಅಂದಾಜು ವಿಷದ ಪ್ರಮಾಣವನ್ನು ಸಹ ತಿಳಿಸಲಿದೆ.
'ಈ ವಿಧಾನದ ಪರೀಕ್ಷೆಯಲ್ಲಿ 10ರಿಂದ 15 ನಿಮಿಷಗಳಲ್ಲಿ ಫಲಿತಾಂಶ ಸಿಗಲಿದೆ. ಹಾವು ಕಚ್ಚಿದ ನಾಲ್ಕು ಗಂಟೆಗಳೊಳಗೆ ಪರೀಕ್ಷೆ ನಡೆಸಬಹುದು' ಎಂದು ಗುವಾಹಟಿ ಸಂಸ್ಥೆಯ ನಿರ್ದೇಶಕ ಆಶಿಶ್ ಕುಮಾರ್ ಮುಖರ್ಜಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಈ ಹೊಸ ವಿಧಾನವನ್ನು ವಿವರಿಸುವ ಸಂಶೋಧನಾ ಪ್ರಬಂಧ 'ಪಿಎಲ್‌ಒಎಸ್ ನೆಗ್ಲೆಕ್ಟೆಡ್ ಟ್ರಾಪಿಕಲ್ ಡಿಸೀಸಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ.