ನವದೆಹಲಿ: ಚಂಡೀಗಢದಲ್ಲಿ 2024ರಲ್ಲಿ ನಡೆದಿದ್ದ ಗ್ರನೇಡ್ ದಾಳಿ ಕೃತ್ಯದ ಸಂಬಂಧ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಸಂಘಟನೆಯ ನಾಲ್ವರು ಉಗ್ರರ ವಿರುದ್ಧ ಎನ್‌ಐಎ ಆರೋಪಪಟ್ಟಿ ದಾಖಲಿಸಿದೆ.
ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂದಾ, ಅಮೆರಿಕ ಮೂಲದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸ್ಸಿ ಈ ನಾಲ್ವರು ಉಗ್ರರಲ್ಲಿ ಸೇರಿದ್ದಾರೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿನ ವಿಶೇಷ ಎನ್‌ಐಎ ಕೋರ್ಟ್‌ನಲ್ಲಿ, ಈ ನಾಲ್ವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಮತ್ತು ಇತರೆ ಸಂಬಂಧಿತ ಕಾಯ್ದೆಗಳಡಿ ಆರೋಪಪಟ್ಟಿ ದಾಖಲಿಸಲಾಗಿದೆ.
ಉಲ್ಲೇಖಿತ ಗ್ರನೇಡ್ ದಾಳಿ ಕೃತ್ಯದಲ್ಲಿ ರಿಂದಾ ಮತ್ತು ಪಸ್ಸಿ ಪ್ರಮುಖ ಸಂಚುಕೋರರಾಗಿದ್ದರು. ದಾಳಿ ನಡೆಸಲು ಈ ಇಬ್ಬರು ಅಗತ್ಯ ಸಾರಿಗೆ ಸೌಲಭ್ಯ, ಹಣಕಾಸು, ಶಸ್ತ್ರಾಸ್ತ್ರಗಳ ನೆರವು ಒದಗಿಸಿದ್ದರು ಎಂದು ತಿಳಿಸಿದೆ.
ಪಂಜಾಬ್ ಪೊಲೀಸ್‌ನ ನಿವೃತ್ತ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ಸೆಪ್ಟೆಂಬರ್ 2024ರಲ್ಲಿ ದಾಳಿ ನಡೆದಿತ್ತು. ಈ ಕೃತ್ಯಕ್ಕೆ ಪ್ರಮುಖ ಆರೋಪಿಗಳು ಸ್ಥಳೀಯರಾದ ರೋಹನ್ ಮಾಸಿಹ್ ಮತ್ತು ವಿಶಾಲ್ ಮಾಸಿಹ್ ಅವರ ನೆರವು ಪಡೆದಿದ್ದರು. ಈ ಇಬ್ಬರ ನೇರ ಸೂಚನೆಯಂತೆ ದಾಳಿ ನಡೆದಿತ್ತು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.