ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಹಿಮಕುಸಿತ ಉಂಟಾದ ಸ್ಥಳದಲ್ಲಿ ಮತ್ತೊಬ್ಬ ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೂರು ಮಂದಿ ಈಗಲೂ ನಾಪತ್ತೆಯಾಗಿದ್ದು, ಶ್ವಾನದಳದ ನೆರವಿನಿಂದ ಶೋಧ ಮುಂದುವರಿಸಲಾಗಿದೆ.
ಮಾಣಾ ಮತ್ತು ಬದರೀನಾಥದ ನಡುವೆ ಇರುವ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಶಿಬಿರದಲ್ಲಿ ಶುಕ್ರವಾರ ಮುಂಜಾನೆ ಹಿಮಕುಸಿತ ಉಂಟಾಯಿತು. ಶಿಬಿರದಲ್ಲಿದ್ದ ಕಂಟೇನರ್‌ಗಳು ಹಾಗೂ ಶೆಡ್ ಒಂದರಲ್ಲಿ ಒಟ್ಟು 55 ಮಂದಿ ಸಿಲುಕಿದ್ದರು.
ಹಿಮಕುಸಿತದಲ್ಲಿ ಸಿಲುಕಿದ 46 ಕಾರ್ಮಿಕರನ್ನು ಜ್ಯೋತಿರ್ಮಠದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ ವೈದ್ಯರು ತಿಳಿಸಿದ್ದಾರೆ. ಕಾರ್ಮಿಕರೊಬ್ಬರ ಬೆನ್ನುಹುರಿಗೆ ತೀವ್ರ ಪೆಟ್ಟಾಗಿದ್ದು , ಅವರನ್ನು ಹೃಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ರಕ್ಷಿಸಿರುವವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ' ಎಂದು ಲೆಫ್ಟಿನೆಂಟ್ ಕರ್ನಲ್ ಡಿ.ಎಸ್.ಮಾಲ್ದ್ಯಾ ತಿಳಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್‌ನಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡರು.
'ಭಾರತೀಯ ಸೇನೆ, ಇಂಡೋ -ಟಿಬೇಟಿಯನ್ ಪಡೆ, ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹವಾಮಾನ ತಿಳಿಯಾದ ತಕ್ಷಣವೇ ದೆಹಲಿಯಿಂದ ಜಿಪಿಆರ್ ವ್ಯವಸ್ಥೆಯನ್ನು ತರಿಸಿಕೊಂಡು ರಕ್ಷಣಾ ಕಾರ್ಯ ಚುರುಕುಗೊಳಿಸಲಾಗುವುದು' ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ತಿಳಿಸಿದರು.
ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿದ ಕಾರ್ಮಿಕರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿರುವ ಸೇನಾ ಯೋಧರು-ಪಿಟಿಐ ಚಿತ್ರಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ಮುಖ್ಯಮಂತ್ರಿಹಿಮಕುಸಿತ ಸಂಭವಿಸಿದ ಜಾಗಕ್ಕೆ ಅತ್ಯಾಧುನಿಕ ಥರ್ಮಲ್ ಇಮೇಜಿಂಗ್ ಕ್ಯಾಮೆರಾ ಕಳುಹಿಸಕಾಗಿದೆ. ಪ್ರತಿಕೂಲ ವಾತಾವರಣವಿದ್ದು ಸೋಮವಾರ ಕಾರ್ಯಾಚರಣೆ ಮುಂದುವರಿಸಲಾಗುವುದು.