ಭುವನೇಶ್ವರ: 'ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ ಸಂದರ್ಭದಲ್ಲಿ ಒಡಿಶಾ ರಾಜ್ಯದಲ್ಲಿ 50 ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ' ಎಂದು ಮುಖ್ಯಮಂತ್ರಿ ಮೋಹನ ಚರಣ ಮಾಝಿ ಹೇಳಿದ್ದಾರೆ.
ಬಿಜೆಡಿ ಶಾಸಕ ಸೌವಿಕ್ ಬಿಸ್ವಾಲ್ ಅವರ ಪ್ರಶ್ನೆಗೆ ಉತ್ತರಿಸಿದ ಮಾಝಿ, '49 ಪತ್ರಕರ್ತರ ಕುಟುಂಬಗಳಿಗೆ ತಲಾ ₹15 ಲಕ್ಷದಂತೆ ಎಕ್ಸ್‌ಗ್ರೇಷಿಯಾ ನೀಡಲಾಗಿದೆ.
ಒಂದು ಕುಟುಂಬವು ಬೇರೆ ರಾಜ್ಯದಿಂದ ಇಂಥದ್ದೇ ನೆರವು ಪಡೆದಿರುವುದರಿಂದ ಅವರಿಗೆ ಒಡಿಶಾ ಸರ್ಕಾರದ ನೆರವು ನೀಡಿಲ್ಲ' ಎಂದು ತಿಳಿಸಿದ್ದಾರೆ.
'ಕೋವಿಡ್ ಸಂದರ್ಭದಲ್ಲಿ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಖುರ್ದಾ, ಭುವನೇಶ್ವರ, ಸುಂದರಘಡ ಜಿಲ್ಲೆಗಳೂ ಸೇರಿಕೊಂಡಿವೆ. ಒಟ್ಟು 30 ಜಿಲ್ಲೆಗಳಲ್ಲಿ 19 ಜಿಲ್ಲೆಗಳ ಪತ್ರಕರ್ತರು ಮೃತಪಟ್ಟಿದ್ದಾರೆ' ಎಂದು ಸಭೆಗೆ ವಿವರಿಸಿದ್ದಾರೆ.
'ಕಳೆದ ಐದು ವರ್ಷಗಳಲ್ಲಿ 14 ಕಾರ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ದಾಖಲಾದ ದೂರಿನ ಅನ್ವಯ 18 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪತ್ರಕರ್ತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಬದ್ಧ' ಎಂದಿದ್ದಾರೆ.