ಕೈರೊ: ಅಕ್ಟೋಬರ್ 7ರಿಂದ ಇಲ್ಲಿಯವರೆಗೆ ಗಾಜಾದ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
50,021 ಪ್ಯಾಲೆಸ್ಟೀನಿಯರು ಮೃತಪಟ್ಟರೆ, 1,13,274 ಮಂದಿ ಯುದ್ಧದಲ್ಲಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಶನಿವಾರ(ಮಾ.22) ರಾತ್ರಿ ನಡೆಸಿದ ದಾಳಿಯಲ್ಲಿ ಹಮಾಸ್ ಸಂಘಟನೆಯ ನಾಯಕ ಸಲಾಹ್ ಬರ್ದಾವಿಲ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದರು.
ಹಮಾಸ್ ಜೊತೆಗಿನ ಕದನವಿರಾಮ ಕೊನೆಗೊಳಿಸಿದ್ದ ಇಸ್ರೇಲ್ ಕಳೆದ ವಾರ ನಡೆಸಿದ ದಾಳಿಯಲ್ಲಿ ನೂರಾರು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದರು.
2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಕ್ಫರ್ ಆಜಾ ಪ್ರದೇಶದ ಮೇಲೆ ದಾಳಿ ನಡೆಸಿ ಹಲವು ಮಂದಿಯನ್ನು ಕೊಂದಿದ್ದರು. 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು.
ಇಸ್ರೇಲ್-ಹಮಾಸ್ ನಡುವೆ ಸಂಪೂರ್ಣ ಕದನವಿರಾಮ ಘೋಷಿಸುವ ಇಲ್ಲಿಯವರೆಗಿನ ಎಲ್ಲ ಪ್ರಯತ್ನಗಳು ವಿಫಲವಾಗಿವೆ.