ಲಖನೌ: ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸೇರಿದಂತೆ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಸ್ಥಳಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
ಮೊಘಲ್ ದೊರೆ ಔರಂಗಜೇಬ್ ಒಳಗೊಂಡಂತೆ ಮುಸ್ಲಿಮ್ ದೊರೆಗಳ ಹೆಸರಿನಲ್ಲಿರುವ ಪ್ರದೇಶಗಳಿಗೆ ಹಿಂದೂ ದೇವರುಗಳ ಮತ್ತು ಸಂತರ ಹೆಸರುಗಳನ್ನು ಇಡಲಾಗುವುದು.
ಪಟ್ಟಣದ ಸುಮಾರು 50 ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಾರಾಣಸಿ ನಗರಸಭೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮರುನಾಮಕರಣಗೊಳ್ಳಲಿರುವ ಪ್ರದೇಶಗಳಲ್ಲಿ ಔರಂಗಾಬಾದ್ (ಮೊಘಲ್ ದೊರೆ ಔರಂಗಜೇಬ್‌ನ ಹೆಸರು ಇಡಲಾಗಿದೆ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಮದನಪುರ, ಖಾಲಿಸ್‌ಪುರ ಹಾಗೂ ಕಝಾಕ್‌ಪುರ ಪ್ರಮುಖವಾದವು.
ಔರಂಗಾಬಾದ್‌ಗೆ ನಾರಾಯಣ ಧಾಮ ಎಂಬ ಹೆಸರಿಡಲು ನಿರ್ಧರಿಸಲಾಗಿದೆ. ಖಾಲಿಸ್‌ಪುರಕ್ಕೆ ಬ್ರಹ್ಮತೀರ್ಥ, ಕಝಾಕ್‌ಪುರಕ್ಕೆ ಅನರಕ್ ತೀರ್ಥ ಮತ್ತು ಮದನಪುರಕ್ಕೆ ಪುಷ್ಪದಂತೇಶ್ವರ ಎಂದು ಮರುನಾಮಕರಣ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.
ವಾರಾಣಸಿ ಕ್ಷೇತ್ರದ ಈ ಪ್ರದೇಶಗಳ ಮರುನಾಮಕರಣದ ಪ್ರಸ್ತಾಪವನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ವಿರೋಧ ಪಕ್ಷಗಳು ಈ ನಿರ್ಧಾರವನ್ನು ಟೀಕಿಸಿದ್ದು, 'ಇದು ರಾಜ್ಯದಲ್ಲಿ ತನ್ನ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಮಾಡಿದ ತಂತ್ರ' ಎಂದು ಹೇಳಿವೆ.