ನವದೆಹಲಿ: ಅಮೆರಿಕದಿಂದ ಆಮದಾಗುವ ಅರ್ಧಕ್ಕಿಂತ ಹೆಚ್ಚು (ಶೇ 55) ವಸ್ತುಗಳ ಮೇಲಿನ ಸುಂಕವನ್ನು ಭಾರತ ಕಡಿತಗೊಳಿಸಲು ಮುಕ್ತವಾಗಿದೆ. ಅದರ ಮೌಲ್ಯ ₹1.96 ಲಕ್ಷ ಕೋಟಿ (23 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದೆ ಎಂದು ಎರಡೂ ದೇಶಗಳ ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಮೊದಲ ಹಂತದ ಭಾಗವಾಗಿ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪರಸ್ಪರ ಸುಂಕದಿಂದ ಪರಿಹಾರ ಪಡೆಯುವ ಗುರಿಯನ್ನು ಇದು ಹೊಂದಿದೆ. ಇದು ಈ ವರ್ಷದ ಅತಿದೊಡ್ಡ ಸುಂಕ ಕಡಿತವಾಗಬಹುದು ಎಂದು ಅಂದಾಜಿಸಲಾಗಿದೆ.
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ವಿಧಿಸಲಿರುವ ಸುಂಕಕ್ಕೆ ಅನುಗುಣವಾಗಿ ಅಮೆರಿಕವು ಏ. 2ರಿಂದ ಸುಂಕ ಹೆಚ್ಚಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ಇದು ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಅಮೆರಿಕದ ಅಧಿಕ ಸುಂಕದ ಪರಿಣಾಮವನ್ನು ತಗ್ಗಿಸಲು ಬಯಸಿರುವ ಭಾರತ, ಅದಕ್ಕೆ ತಕ್ಕಂತೆ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ವಿಶ್ಲೇಷಣೆಯ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿರುವ ಶೇ 87ರಷ್ಟು ಸರಕುಗಳ ಮೇಲೆ ಪರಸ್ಪರ ಸುಂಕವು ಪರಿಣಾಮ ಬೀರಲಿದೆ. ಅದರ ಮೌಲ್ಯ ₹5.64 ಲಕ್ಷ ಕೋಟಿ (66 ಶತಕೋಟಿ ಡಾಲರ್) ಎಂಬುದಾಗಿ ಅಂದಾಜಿಸಲಾಗಿದೆ ಎಂದು ಉಭಯ ದೇಶಗಳ ಸರ್ಕಾರಿ ಮೂಲಗಳು ತಿಳಿಸಿವೆ.
ಒಪ್ಪಂದದ ಅನ್ವಯ, ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಶೇ 55ರಷ್ಟು ಸರಕುಗಳಿಗೆ ಸುಂಕವನ್ನು ಕಡಿಮೆ ಮಾಡಲಿದೆ. ಕೆಲವು ಸರಕುಗಳ ಮೇಲಿನ ಸುಂಕ ಗಣನೀಯವಾಗಿ ತಗ್ಗಿದರೆ, ಇನ್ನೂ ಕೆಲವು ಸರಕುಗಳ ಮೇಲಿನ ಸುಂಕ ಸಂಪೂರ್ಣವಾಗಿ ರದ್ದಾಗಬಹುದು ಎಂದು ಮೂಲಗಳು ಹೇಳಿವೆ.
ಆದರೆ, ಈ ಸಂಬಂಧ ಭಾರತದ ವ್ಯಾಪಾರ ಸಚಿವಾಲಯವಾಗಲಿ, ಪ್ರಧಾನಿ ಕಚೇರಿಯಾಗಲಿ, ಸರ್ಕಾರದ ವಕ್ತಾರರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಸುಂಕ ಕಡಿತದ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ' ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಭಾರತ ಸೇರಿದಂತೆ ಕೆಲ ದೇಶಗಳ ಸುಂಕ ನೀತಿ ವಿರುದ್ಧ ಸಮರ ಸಾರಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದ್ದು, 'ಸುಂಕಗಳ ರಾಜ' ಎಂದೆಲ್ಲ ಜರಿದಿದ್ದಾರೆ.