ಇಂಫಾಲ: ಮಣಿಪುರದಲ್ಲಿ ನಡೆಸಲಾದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಐವರು ಉಗ್ರರನ್ನು ಬಂಧಿಸಲಾಗಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಕುಂಬಿ ಟೆರಾಖೋಂಗ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಪ್ರೆಪಕ್ ಸಂಘಟನೆಯ ಮೂವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಓಯಿನಮ್ ಅಬುಂಗ್ ಮೈತೇಯಿ(31), ಯುಮ್ಲೆಂಬಮ್ ರೋಮೇಶ್ ಸಿಂಗ್ (47) ಮತ್ತು ಆರ್‌ಕೆ ನೇವಿ ಮೈತೇಯಿ(32) ಬಂಧಿತರು. ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ ಪೂರ್ವ ಜಿಲ್ಲೆಯ ಮಂತ್ರಿಪುಖ್ರಿ ಬಜಾರ್‌ನಲ್ಲಿ ಸಂಘಟನೆಯ ಮತ್ತೊಬ್ಬ ಸದಸ್ಯನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ತಾಜ್ ಖಾನ್ (37) ಬಂಧಿತ ವ್ಯಕ್ತಿ. ಈತ ಸ್ಥಳೀಯ ಅಂಗಡಿಗಳಲ್ಲಿ ಸುಲಿಗೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂಫಾಲ ಪಶ್ಚಿಮ ಜಿಲ್ಲೆಯ ನಿಂಗೊಮ್‌ವಮ್ ಲಂಖೈನಲ್ಲಿ ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಸಂಘಟನೆಯ ಸದಸ್ಯ ಶಾಗೋಲ್ಶೆಮ್ ಪ್ರಬಿನ್ ಸಿಂಗ್ (27) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.