ಚೆನ್ನೈ: ಮಹತ್ವಾಕಾಂಕ್ಷೆಯ 'ಚಂದ್ರಯಾನ-5' ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಭಾನುವಾರ ಹೇಳಿದ್ದಾರೆ.
ಇಸ್ರೊ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಯುಕ್ತ ಇಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ.
'ಚಂದಿರ ಅಂಗಳದ ಅಧ್ಯಯನಕ್ಕಾಗಿ, ಚಂದ್ರಯಾನ-3ರ ಗಗನನೌಕೆ 25 ಕೆ.ಜಿ ಭಾರದ ರೋವರ್ (ಪ್ರಗ್ಯಾನ್) ಹೊತ್ತೊಯ್ದಿತ್ತು. ಚಂದ್ರನ ಮೇಲ್ಮೈ ಅಧ್ಯಯನ ಉದ್ದೇಶದ ಚಂದ್ರಯಾನ-5ರ ಗಗನನೌಕೆ 250 ಕೆ.ಜಿ ಭಾರದ ರೋವರ್ ಒಯ್ಯಲಿದೆ' ಎಂದು ಹೇಳಿದ್ದಾರೆ.
'ಚಂದ್ರಯಾನ-2ರ ಗಗನನೌಕೆಯಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಈಗಲೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಕಳುಹಿಸುತ್ತಿದೆ' ಎಂದೂ ಹೇಳಿದ್ದಾರೆ.
'ಚಂದ್ರಯಾನ-4' ಕಾರ್ಯಕ್ರಮದಡಿ 2027ರಲ್ಲಿ ಗಗನನೌಕೆಯನ್ನು ಕಳುಹಿಸಲಾಗುತ್ತಿದ್ದು, ಚಂದ್ರನ ಮೇಲ್ಮೈನಲ್ಲಿರುವ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಉದ್ದೇಶ ಹೊಂದಲಾಗಿದೆ.