ನವದೆಹಲಿ: ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಮೃತಪಟ್ಟ ದುರ್ಘಟನೆ ನಡೆದ ವಾರಗಳ ನಂತರ, ಎಚ್ಚೆತ್ತಿರುವ ರೈಲ್ವೆ ಸಚಿವಾಲಯವು ದೇಶದ 60 ರೈಲ್ವೆ ನಿಲ್ದಾಣಗಳ ಹೊರಗೆ ಕಾಯುವ ಪ್ರದೇಶ ಸ್ಥಾಪನೆಗೆ ಮುಂದಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ದೇಶದಾದ್ಯಂತ 60 ನಿಲ್ದಾಣಗಳ ಹೊರಗೆ ಶಾಶ್ವತ ಕಾಯುವ ಪ್ರದೇಶಗಳನ್ನು ನಿರ್ಮಾಣ ಮಾಡುವ ನಿರ್ಧಾರವನ್ನು ಪ್ರಕಟಿಸಿದರು.
'ನವದೆಹಲಿ, ಆನಂದ್ ವಿಹಾರ್, ವಾರಾಣಸಿ, ಅಯೋಧ್ಯೆ ಮತ್ತು ಪಟ್ನಾ ನಿಲ್ದಾಣಗಳಲ್ಲಿ ಪೈಲಟ್ ಯೋಜನೆಗಳು ಪ್ರಾರಂಭವಾಗಿವೆ'ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ರೈಲುಗಳು ಪ್ಲಾಟ್‌ಫಾರ್ಮ್‌ಗೆ ಬಂದಾಗ ಮಾತ್ರ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಲು ಅವಕಾಶ ನೀಡಲಾಗುವುದು. ಇದು ನಿಲ್ದಾಣಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಲಾಗಿದೆ.
ಟಿಕೆಟ್ ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್ ಇಲ್ಲದ ಪ್ರಯಾಣಿಕರು ಹೊರಗಿನ 'ಕಾಯುವ ಪ್ರದೇಶ'ದಲ್ಲಿ ಕಾಯಬೇಕಾಗುತ್ತದೆ. ದೃಢೀಕೃತ ಟಿಕೆಟ್ ಹೊಂದಿರುವವರಿಗೆ ಪ್ಲಾಟ್‌ಫಾರ್ಮ್‌ಗಳಿಗೆ ನೇರ ಪ್ರವೇಶವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.