ಮಾಸ್ಕೊ: ಮಂಗಳವಾರ ಬೆಳಿಗ್ಗೆ ನಡೆದ ಬೃಹತ್ ದಾಳಿಯಲ್ಲಿ ರಷ್ಯಾದ ರಾಜಧಾನಿ ಮಾಸ್ಕೊವನ್ನು ಗುರಿಯಾಗಿಸಿಕೊಂಡು ಹಾರಿಸಿದ್ದ ಕನಿಷ್ಠ 60 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೊ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ.
ರಷ್ಯಾದ ರಾಜಧಾನಿಯನ್ನು ಸುತ್ತುವರೆದಿರುವ ರಾಮೆನ್‌ಸ್ಕಿ ಮತ್ತು ಡೊಮೊಡೆಡೋವೊ ಜಿಲ್ಲೆಗಳಲ್ಲಿ ಕನಿಷ್ಠ 11 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೋಬ್ಯಾನಿನ್ ಹೇಳಿದ್ದಾರೆ.
ಇತರ ಡ್ರೋನ್‌ಗಳನ್ನು ಎಲ್ಲಿ ಹೊಡೆದುರುಳಿಸಲಾಗಿದೆ ಎಂಬುದನ್ನು ಅವರು ನಿರ್ದಿಷ್ಟಪಡಿಸಲಿಲ್ಲ. ಅವು ಮಾಸ್ಕೊ ಕಡೆಗೆ ಹಾರುತ್ತಿದ್ದವು ಎಂದು ಮಾತ್ರ ಅವರು ಹೇಳಿದ್ದಾರೆ.
ಮಾಸ್ಕೊದ ಎರಡು ವಿಮಾನ ನಿಲ್ದಾಣಗಳಾದ ಡೊಮೊಡೆಡೋವೊ ಮತ್ತು ಝುಕೊವ್‌ಸ್ಕಿಯ ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ನಿರ್ಬಂಧಿಸಲಾಗಿದೆ.
ಡ್ರೋನ್ ದಾಳಿಯಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ, ದಾಳಿಯು ಮಾಸ್ಕೊದ ಕಟ್ಟಡವೊಂದರ ಛಾವಣಿಗೆ ಸಣ್ಣ ಹಾನಿಯನ್ನುಂಟುಮಾಡಿದೆ ಎಂದು ಸೋಬ್ಯಾನಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲ ತಿಂಗಳುಗಳಿಂದ ಮಾಸ್ಕೊವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳಲ್ಲಿ ಇದು ಅತಿದೊಡ್ಡ ದಾಳಿಯಾಗಿದೆ.