ದೀರ್ ಅಲ್-ಬಲಾಹ್: ಗಾಜಾ ಪಟ್ಟಿಯ ವಿವಿಧೆಡೆ ಇಸ್ರೇಲ್ ಸೇನೆಯು ಭಾನುವಾರ ರಾತ್ರಿ ವಾಯುದಾಳಿ ನಡೆಸಿದ್ದು, 61 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ 143 ಮಂದಿ ಗಾಯಗೊಡಿದ್ದಾರೆ.
ಖಾನ್ ಯೂನಿಸ್ ಪಟ್ಟಣದಲ್ಲಿದ್ದ ನಾಸೀರ್ ಆಸ್ಪತ್ರೆಯ ಕಟ್ಟಡದ ಮೇಲೆ ನಡೆದ ಬಾಂಬ್ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ.
ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯವು ತಿಳಿಸಿದೆ.
ಆಸ್ಪತ್ರೆ ಮೇಲೆ ನಡೆಸಿದ ದಾಳಿಯನ್ನು ಇಸ್ರೇಲ್ ಸಮರ್ಥಿಸಿಕೊಂಡಿದೆ. ಆಸ್ಪತ್ರೆಯ ಒಳಭಾಗದಲ್ಲಿ ಹಮಾಸ್ ಬಂಡುಕೋರರು ಕಾರ್ಯಾಚರಣೆ ನಡೆಸುತ್ತಿದ್ದು, ಅವರನ್ನು ಬಗ್ಗುಬಡಿಯಲು ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಇಸ್ರೇಲ್- ಹಮಾಸ್ ಬಂಡುಕೋರರ ನಡುವೆ ಯುದ್ಧ ಆರಂಭಗೊಂಡ ಬಳಿಕ 50,082 ಮಂದಿ ಮೃತಪಟ್ಟಿದ್ದಾರೆ. 1,13,408 ಮಂದಿ ಗಾಯಗೊಂಡಿದ್ದಾರೆ.
ಹೊಸ ಕದನ ವಿರಾಮ ಪ್ರಸ್ತಾಪ:
ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ವಿರಾಮವನ್ನು ಮತ್ತೆ ಹಾದಿಗೆ ತರಲು ಈಜಿಪ್ಟ್ ಸರ್ಕಾರವು ಹೊಸ ಪ್ರಸ್ತಾವವನ್ನು ಮುಂದಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.