ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಠಗುಡಂ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಒಟ್ಟು 64 ಸದಸ್ಯರು ಶನಿವಾರ ಜಿಲ್ಲಾ ಪೊಲೀಸರ ಮುಂದೆ ಶರಣಾಗಿದ್ದಾರೆ.
ಛತ್ತೀಸಗಢ ಮತ್ತು ತೆಲಂಗಾಣದ ಗಡಿ ಗ್ರಾಮಗಳ ಪ್ರದೇಶ ಸಮಿತಿ ಸದಸ್ಯ (ACM) ಸೇರಿದಂತೆ ವಿವಿಧ ಕೇಡರ್‌ಗಳಿಗೆ ಸೇರಿದ 64 ಮಂದಿ ಮಾವೋವಾದಿಗಳು ನಕ್ಸಲ್‌ವಾದದ ಹಾದಿಯನ್ನು ತ್ಯಜಿಸಿ ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶರಣಾದ 64 ಸದಸ್ಯರು ಸೇರಿದಂತೆ ಕಳೆದ ಎರಡೂವರೆ ತಿಂಗಳಿನಲ್ಲಿ ಒಟ್ಟು 122 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಭದ್ರಾದ್ರಿ ಕೊಠಗುಡಂ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ತಿಳಿಸಿದ್ದಾರೆ.
ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷವು ಹಳೆಯ ಸಿದ್ಧಾಂತವನ್ನು ಅನುಸರಿಸುತ್ತಿದೆ ಮತ್ತು ಬುಡಕಟ್ಟು ಜನರ ನಂಬಿಕೆ ಮತ್ತು ಬೆಂಬಲವನ್ನು ಕಳೆದುಕೊಂಡಿದೆ ಎಂದು ಶರಣಾದ ಉಗ್ರರು ಅರಿತುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಶರಣಾಗಲು ಮತ್ತು ಸಾಮಾನ್ಯ ಜೀವನ ನಡೆಸಲು ಬಯಸುವ ಮಾವೋವಾದಿಗಳು ತಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಅಧಿಕಾರಿಗಳನ್ನು ತಮ್ಮ ಕುಟುಂಬ ಸದಸ್ಯರ ಮೂಲಕ ಅಥವಾ ನೇರವಾಗಿ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.