ನವದೆಹಲಿ: ಉತ್ತರಾಖಂಡದಲ್ಲಿ ಒಟ್ಟು ₹6,811 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎರಡು ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.
ಸೋನ್‌ಪ್ರಯಾಗ್‌ನಿಂದ ಕೇದಾರನಾಥ (12.9 ಕಿಮೀ) ಮತ್ತು ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್ ಜಿ (12.4 ಕಿಮೀ) ನಡುವೆ ಈ ರೋಪ್ ವೇ ನಿರ್ಮಾಣವಾಗಲಿವೆ.
ಈ ಎರಡು ಮಹತ್ವಾಕಾಂಕ್ಷೆಯ ರೋಪ್‌ವೇ ನಿರ್ಮಾಣಕ್ಕೆ 4-6 ವರ್ಷಗಳ ಕಾಲಾವಕಾಶವಿದೆ.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ನಿರ್ಧಾರಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಸೋನ್‌ಪ್ರಯಾಗ್‌ನಿಂದ ಕೇದಾರನಾಥಕ್ಕೆ 12.9 ಕಿಮೀ ರೋಪ್‌ವೇಗೆ ಒಟ್ಟು ₹4,081 ಕೋಟಿ ವೆಚ್ಚ ಮಾಡಲಾಗುತ್ತಿದೆ
ಈ ರೋಪ್‌ವೇ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದು ಅತ್ಯಾಧುನಿಕ ಟ್ರೈ-ಕೇಬಲ್ ಡಿಟ್ಯಾಚೇಬಲ್ ಗೊಂಡೊಲಾ ತಂತ್ರಜ್ಞಾನವನ್ನು ಆಧರಿಸಿದೆ. ಇದು ಗಂಟೆಗೆ 1,800 ಪ್ರಯಾಣಿಕರನ್ನು ಪ್ರತಿ ದಿಕ್ಕಿಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದಿನಕ್ಕೆ 18,000 ಪ್ರಯಾಣಿಕರನ್ನು ಸಾಗಿಸುತ್ತದೆ.
ಗೋವಿಂದಘಾಟ್‌ನಿಂದ ಹೇಮಕುಂಡ ಸಾಹಿಬ್ ಜಿವರೆಗಿನ 12.4 ಕಿಮೀ ರೋಪ್‌ವೇ ಯೋಜನೆಯನ್ನು ಸಹ ₹2,730 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ಹೇಮಕುಂಡ ಸಾಹಿಬ್ ಜಿಗೆ ಪ್ರಯಾಣವು ಗೋವಿಂದಘಾಟ್‌ನಿಂದ 21 ಕಿ.ಮೀ ಎತ್ತರದ ಚಾರಣವಾಗಿದ್ದು, ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳು ಅಥವಾ ಪಲ್ಲಕ್ಕಿಗಳ ಮೂಲಕ ಸಾಗಬೇಕಿದೆ. ಪ್ರಸ್ತಾವಿತ ರೋಪ್‌ವೇಯಿಂದ ಹೇಮಕುಂಡ್ ಸಾಹಿಬ್ ಜಿಗೆ ಭೇಟಿ ನೀಡುವ ಯಾತ್ರಿಕರಿಗೆ ಮತ್ತು ಹೂವುಗಳ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಗೋವಿಂದಘಾಟ್ ಮತ್ತು ಹೇಮಕುಂಡ್ ಸಾಹಿಬ್ ಜಿ ನಡುವೆ ಎಲ್ಲ ಹವಾಮಾನದಲ್ಲೂ ಕೊನೆಯ ಮೈಲಿವರೆಗೂ ಸಂಪರ್ಕವನ್ನು ಈ ರೋಪ್‌ವೇ ಖಚಿತಪಡಿಸುತ್ತದೆ.
ಕೇದಾರನಾಥ ದೇವಾಲಯಕ್ಕೆ ಪ್ರಯಾಣವು ಗೌರಿಕುಂಡದಿಂದ 16 ಕಿ.ಮೀ. ಎತ್ತರದ ಚಾರಣವಾಗಿದ್ದು, ಪ್ರಸ್ತುತ ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳು, ಪಲ್ಲಕ್ಕಿಗಳು ಮತ್ತು ಹೆಲಿಕಾಪ್ಟರ್ ಮೂಲಕ ಸಾಗುತ್ತಿದೆ. ಪ್ರಸ್ತಾವಿತ ರೋಪ್‌ವೇ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವನ್ನು ಒದಗಿಸಲು ಮತ್ತು ಸೋನ್‌ಪ್ರಯಾಗ ಮತ್ತು ಕೇದಾರನಾಥ ನಡುವೆ ಎಲ್ಲಾ ಹವಾಮಾನ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಯೋಜಿಸಲಾಗಿದೆ.