ನವದೆಹಲಿ: ಗುರುತು ಮರೆಮಾಚಲು ಲಿಂಗತ್ವ ಅಲ್ಪಸಂಖ್ಯಾತರ ವೇಷ ಧರಿಸಿದ್ದ 6 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸ್ಥಳೀಯ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಬೆರೆಯಲು ಮತ್ತು ತಮ್ಮ ನೋಟವನ್ನು ಬದಲಿಸಿಕೊಳ್ಳಲು ಅವರು ಶಸ್ತ್ರಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆಗಳಿಗೆ ಒಳಗಾಗಿದ್ದರು ಎಂದು ಅವರು ಹೇಳಿದ್ದಾರೆ.
ಕೆಲವು ಬಾಂಗ್ಲಾದೇಶದ ಪ್ರಜೆಗಳು ಲಿಂಗತ್ವ ಅಲ್ಪಸಂಖ್ಯಾತರ ವೇಷ ಧರಿಸಿ, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ವಿದೇಶಿಯರ ಪತ್ತೆ ಕೋಶದ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಗುರುವಾರ ಜಹಾಂಗೀರ್‌ಪುರಿ ಮೆಟ್ರೊ ನಿಲ್ದಾಣದ ಬಳಿ ಅವರ ಇರುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆರು ಮಂದಿ ಶಂಕಿತರನ್ನು ಅಲ್ಲಿಂದ ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್ ಜಕ್ರಿಯಾ ಮೊಯಿನಾ ಖಾನ್ (24), ಸುಹಾನಾ ಖಾನ್ (21), ಅಖಿ ಸರ್ಕಾರ್ (22), ಮೊಹಮ್ಮದ್ ಬಾವೊಜಿದ್ ಖಾನ್ (24), ಮೊಹಮ್ಮದ್ ರಾಣಾ ಅಲಿಯಾಸ್ ಲೋಬೆಲಿ (26) ಮತ್ತು ಜಾನಿ ಹುಸೇನ್ (20) ಎಂದು ಗುರುತಿಸಲಾಗಿದೆ. ಇವರು ಬಾಂಗ್ಲಾದೇಶದ ಬರ್ಗುನಾ, ಗಾಜಿಪುರ, ಮದರಿಪುರ, ಸಿರಾಜ್‌ಗಂಜ್, ಪಬ್ನಾ ಮತ್ತು ನಗೊವಾನ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ತಮ್ಮ ಕುಟುಂಬದೊಂದಿಗೆ ಮಾತನಾಡಲು ಇವರು ನಿಷೇಧಿತ ಅಪ್ಲಿಕೇಶನ್ ಬಳಸಿರುವುದು ಕಂಡುಬಂದಿದೆ. ಅವರ ಬಳಿಯಿದ್ದ 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಮುಂದಿನ ಗಡೀಪಾರು ಪ್ರಕ್ರಿಯೆಗಾಗಿ ಅವರನ್ನು ಆರ್‌ಕೆ ಪುರಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಲಾಗಿದೆ.