ಚೆನ್ನೈ: ತಮಿಳುನಾಡಿನ ರಾಮೇಶ್ವರಂನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪಂಬನ್ ರೈಲ್ವೆ ಸೇತುವೆಯನ್ನು ರಾಮ ನವಮಿ ದಿನವಾದ ಏಪ್ರಿಲ್ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಹಿರಿಯ ರೈಲ್ವೆ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ರಾಮೇಶ್ವರಂ ರೈಲ್ವೆ ನಿಲ್ದಾಣದಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ R.N.ಸಿಂಗ್ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 6 ರಂದು ರಾಮನ ಜನ್ಮದಿನದ ಅಂಗವಾಗಿ ದೇಶಾದ್ಯಂತ ರಾಮ ನವಮಿ ಆಚರಿಸಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ನೂತನ ರೈಲ್ವೆ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅವರು ರಾಮೇಶ್ವರಂನ ರಾಮನಾಥ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲ ಆರ್.ಎನ್. ರವಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತಮಿಳುನಾಡಿನ ಸಂಸದರು, ಶಾಸಕರು ಹಾಗೂ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ರೈಲ್ವೆ ಮೂಲಗಳು ಹೇಳಿವೆ.
ಬಳಿಕ ಪ್ರಧಾನಿ ಮೋದಿ ದೆಹಲಿಗೂ ತೆರಳುವ ಮುನ್ನಾ ಜನರನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಸುಗಮವಾಗಿ ಕಾರ್ಯಕ್ರಮ ನಡೆಯಲು ಸಂಬಂಧಿಸಿದ ಅಧಿಕಾರಿಗಳು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ. ಹೊಸ ಪಂಬನ್ ರೈಲ್ವೆ ಸೇತುವೆಯು 2.1 ಕಿಮೀ ಉದ್ದವನ್ನು ಹೊಂದಿದೆ. ಮೂಲತಃ ಫೆಬ್ರವರಿ 2019 ರಲ್ಲಿ ಕಾರ್ಯಾರಂಭ ಮಾಡಲಾದ ಸೇತುವೆ ನಿರ್ಮಾಣವು ನವೆಂಬರ್ 2024 ರಲ್ಲಿ ಪೂರ್ಣಗೊಂಡಿತು.
ಅದ್ಬುತ ಎಂಜಿನಿಯರಿಂಗ್ ಕೆಲಸ:
ಸೇತುವೆಯ ಪ್ರಮುಖ ಲಕ್ಷಣವೆಂದರೆ ಹಡುಗು ಬಂದ್ರೆ ಸೇತುವೆ ಮೇಲಕ್ಕೆ ಹೋಗುವಂತೆ ವರ್ಟಿಕಲ್ ಲಿಫ್ಟ್ ತಂತ್ರಜ್ಞಾನ ಬಳಸಲಾಗಿದೆ. ಇದು 660 ಮೆಟ್ರಿಕ್ ಟನ್ ತೂಕವಿದೆ. ಸೇತುವೆಯು ಭಾರತದ ಬೆಳೆಯುತ್ತಿರುವ ಮೂಲಸೌಕರ್ಯದ ಸಂಕೇತವಾಗಿದೆ ಮತ್ತು ರಾಮೇಶ್ವರಂ ದ್ವೀಪಕ್ಕೆ ಸಂಪರ್ಕವನ್ನು ಹೆಚ್ಚಿಸುತ್ತದೆ, ಸಾವಿರಾರು ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.