ನಾಗ್ಪುರ: ಹಿಂಸಾಚಾರ ಪೀಡಿತ ನಾಗ್ಪುರದ ನಾಲ್ಕು ಪ್ರದೇಶಗಳಲ್ಲಿ ಇದ್ದ ಕರ್ಫ್ಯೂ ಅನ್ನು ಭಾನುವಾರ ಹಿಂಪಡೆಯಲಾಗಿದೆ. ಹಿಂಸಾಚಾರ ನಡೆದ ಆರು ದಿನಗಳ ಬಳಿಕ ನಗರದಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ.
ಈ ಹಿಂದೆ ಮಾರ್ಚ್ 20ರಂದು ನಂದನವನ ಹಾಗೂ ಕಪಿಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮಾರ್ಚ್ 22ರಂದು ಪಚ್‌ಪವೊಲಿ, ಶಾಂತಿನಗರ, ಲಕಾಡ್‌ಗಂಜ್, ಸಕ್ಕರ್‌ದರ ಹಾಗೂ ಇಮಾಮ್‌ಬಡಾ ಪ್ರದೇಶಗಳಲ್ಲಿ ಕರ್ಫ್ಯೂ ಹಿಂಪಡೆಯಲಾಗಿತ್ತು.
ಮಾರ್ಚ್ 17ರಂದು ಹಿಂಸಾಚಾರ ನಡೆದ ಬಳಿಕ ಕೊತ್ವಾಲಿ, ಗಣೇಶ ಪೇಟೆ, ತಹಸಿಲ್, ಲಕಾಡ್‌ಗಂಜ್, ಶಾಂತಿನಗರ, ಸಕ್ಕರ್‌ದಾರ, ಇಮಾಮ್‌ಬಡ, ಯಶೋಧರ ನಗರ ಹಾಗೂ ಕಪಿಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿತ್ತು.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ವಿಎಚ್‌ಪಿ ಮತ್ತು ಬಜರಂಗದಳ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪವಿತ್ರ ಶಾಸನಗಳನ್ನು ಹೊಂದಿರುವ 'ಚಾದರ್' ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಯಿಂದ ಉದ್ರಿಕ್ತರಾದ ಜನರು ಸೋಮವಾರ ರಾತ್ರಿ ಕೇಂದ್ರ ನಾಗ್ಪುರ ಪ್ರದೇಶಗಳಲ್ಲಿ ಹಿಂಸಾಚಾರ ನಡೆಸಿದ್ದರು.
ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಕೊತ್ವಾಲಿ, ತಹಸಿಲ್, ಗಣೇಶಪೇಟೆ ಮತ್ತು ಯಶೋಧರ ನಗರ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕುವಂತೆ ನಾಗ್ಪುರ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಆದೇಶಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲು ಮುಂದುವರಿಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಡಿಸಿಪಿ ಶ್ರೇಣಿಯ ಮೂವರು ಸೇರಿದಂತೆ 33 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಘಟನೆ ಸಂಬಂಧ 100ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆಯಿಂದಾದ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುವದು, ಅಗತ್ಯ ಬಿದ್ದರೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲೂ ಹಿಂಜರಿಯುವುದಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.