ಕೊಟ್ಟಾಯಂ: ಬಿಜೆಪಿ ಆಡಳಿತವಿರುವ ಪಾಲಾ ಮುತ್ತೋಳಿ ಪಂಚಾಯತಿ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 7,000 ರೂ.ಗಳನ್ನು ನೀಡುವುದಾಗಿ ಘೋಷಿಸಿದೆ.
ಈ ಮಹತ್ವದ ಘೋಷಣೆ ಪಂಚಾಯತಿಯ 2025-26ನೇ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾವಿಸಲಾಗಿದೆ. ಸರ್ಕಾರ ನೀಡುವ ವೇತನಕ್ಕೆ ಸಮನಾದ ಮೊತ್ತವನ್ನು ಪಾವತಿಸಲು ಪಂಚಾಯತಿ ಆಡಳಿತ ಸಮಿತಿ ನಿರ್ಧರಿಸಿದೆ ಎಂದು ಮುತ್ತೋಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿತ್ಜಿ ಮೀನಾಭವನ್ ಪ್ರಕಟಿಸಿದ್ದಾರೆ.
ಆಶಾ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಬಜೆಟ್‍ನಲ್ಲಿ 12 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಆಶಾ ಕಾರ್ಯಕರ್ತರಿಗೆ ಹೆಚ್ಚುವರಿಯಾಗಿ ರೂ. 500,000 ನೀಡಲಾಗುವುದು ಎಂದು ಅವರು ಹೇಳಿದರು. ವರ್ಷಕ್ಕೆ 84,000 ರೂ.ವಿನಂತೆ ಮೀಸಲಿಡಲಾಗಿದೆ.
ರಾಜ್ಯದ ಹಲವು ಯುಡಿಎಫ್ ಸ್ಥಳೀಯಾಡಳಿತ ಸಂಸ್ಥೆಗಳು ಈಗಾಗಲೇ ಆಶಾ ಕಾರ್ಯಕರ್ತರಿಗೆ ಹೆಚ್ಚುವರಿ ಸವಲತ್ತುಗಳನ್ನು ಘೋಷಿಸಿರುವ ಮಧ್ಯೆ ಮುತ್ತೋಳಿ ಗ್ರಾಮ ಪಂಚಾಯತಿ ಅತಿ ಹೆಚ್ಚು ಮೊತ್ತವನ್ನು ಹಂಚಿಕೆ ಮಾಡಿ ತಿಂಗಳಿಗೆ ಅತಿ ಹೆಚ್ಚು ಮೊತ್ತವನ್ನು ನೀಡುವುದಾಗಿ ತಿಳಿಸಿರುವುದು ಗಮನಾರ್ಹ.
ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಸೆಕ್ರಟರಿಯೇಟ್ ಮುಂದೆ ಮುಷ್ಕರ ಮುಂದುವರಿಯುತ್ತಿರುವಾಗ ಮುತ್ತೋಳಿ ಪಂಚಾಯತಿ ಆಶಾ ಕಾರ್ಯಕರ್ತೆಯರಿಗೆ ನೆರವಿಗೆ ದೊಡ್ಡ ಮೊತ್ತ ಘೋಷಿಸಿದೆ. ಬಿಜೆಪಿ ಆಡಳಿತವಿರುವ ಪಾಲಕ್ಕಾಡ್ ನಗರಸಭೆಯು ತನ್ನ ಬಜೆಟ್‍ನಲ್ಲಿ ಆಶಾ ಕಾರ್ಯಕರ್ತರಿಗೆ ವಾರ್ಷಿಕವಾಗಿ 12,000 ರೂ.ಗಳನ್ನು ನೀಡುವುದಾಗಿ ಬುಧವಾರವಷ್ಟೇ ಘೋಷಿಸಿತ್ತು. ಇದರೊಂದಿಗೆ, ಪ್ರತಿ ಆಶಾ ಕಾರ್ಯಕರ್ತೆಯರಿಗೆ 1,000 ರೂ.ಗಳ ಹೆಚ್ಚಳವಾಗುತ್ತದೆ.
ಈ ಹಿಂದೆ, ಪತ್ತನಂತಿಟ್ಟದಲ್ಲಿರುವ ಯುಡಿಎಫ್ ಆಡಳಿತದ ವೆಚುಚಿರ ಮತ್ತು ಕೊನ್ನಿ ಗ್ರಾಮ ಪಂಚಾಯಿತಿಗಳು, ಕೊಲ್ಲಂನಲ್ಲಿರುವ ತೋಡಿಯೂರ್ ಗ್ರಾಮ ಪಂಚಾಯಿತಿ ಮತ್ತು ಕೋತಮಂಗಲಂನಲ್ಲಿರುವ ವರಪೆಟ್ಟಿ ಪಂಚಾಯತ್‍ಗಳು ಆಶಾ ಕಾರ್ಯಕರ್ತರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಘೋಷಿಸಿದ್ದವು.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ 7,000 ರೂ.ಗಳ ಹೆಚ್ಚುವರಿ ವೇತನ ನೀಡುವ ಮುತ್ತೋಳಿ ಗ್ರಾಮ ಪಂಚಾಯತ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಬಿಜೆಪಿ ಪಶ್ಚಿಮ ಜಿಲ್ಲಾಧ್ಯಕ್ಷ ಜಿ. ಲಿಜಿನ್ ಲಾಲ್ ಹೇಳಿದ್ದಾರೆ. ಇಂತಹ ಅನುಕರಣೀಯ ನಿರ್ಧಾರ ತೆಗೆದುಕೊಂಡ ಪಂಚಾಯತ್ ಆಡಳಿತ ಸಮಿತಿಯನ್ನು ನಾನು ಅಭಿನಂದಿಸುತ್ತೇನೆ. ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದೆ. ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಲಾಗುತ್ತಿರುವ ಮುಷ್ಕರವನ್ನು ಅವಮಾನಿಸುವ ನಿಲುವನ್ನು ಸರ್ಕಾರ ಮತ್ತು ಆಡಳಿತ ಪಕ್ಷ ಅಳವಡಿಸಿಕೊಂಡಿದೆ ಎಂದು ಲಿಜಿನ್ ಲಾಲ್ ಆರೋಪಿಸಿದರು.
ಈ ಮಧ್ಯೆ ಪಂಚಾಯತಿಗಳು ಘೋಷಿಸಿರುವ ಹೆಚ್ಚುವರಿ ಮೊತ್ತ ಅನುಮತಿಸಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಬೇಕೆಂಬುದೂ ಇಲ್ಲಿ ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮೊತ್ತ ಯಾವ ಹಾದಿ ಹಿಡಿಯಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡವಬೇಕಿದೆ.