ರಾಂಚಿ: ಜಾರ್ಖಂಡ್‌ನಲ್ಲಿ ಸುಮಾರು 7,930 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ರಾಮದಾಸ್ ಸೊರೇನ್ ತಿಳಿಸಿದ್ದಾರೆ.
ಶಿಕ್ಷಕರ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ರಾಜ್ ಸಿನ್ಹಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮದಾಸ್, 'ರಾಜ್ಯದಲ್ಲಿ 7,930 ಶಾಲೆಗಳು ತಲಾ ಒಬ್ಬರು ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ಈ ಏಕ-ಶಿಕ್ಷಕ ಶಾಲೆಗಳಲ್ಲಿ 3.81 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ' ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 103 ಸರ್ಕಾರಿ ಶಾಲೆಗಳು ಯಾವುದೇ ವಿದ್ಯಾರ್ಥಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆ ಶಾಲೆಗಳಲ್ಲಿ 17 ಮಂದಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲು ನಾವು ಆಯಾ ಪ್ರದೇಶಗಳಲ್ಲಿ 'ಶಾಲಾ ಚಲೋ ಅಭಿಯಾನ'ವನ್ನು ನಡೆಸುತ್ತಿದ್ದೇವೆ. 26,000 ಸಹಾಯಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಮದಾಸ್ ತಿಳಿಸಿದ್ದಾರೆ.