ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಬಾಲಕಿ ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರನ್ನು ದಿಲಾವರ್ ಖಾನ್ (48), ಬ್ಯೂಟಿ ಬೇಗಂ (39), ರಫಿಕುಲ್ (43), ತೌಹಿದ್ (20), ಎಂಡಿ ಅಜರ್ (28), ಜಾಕಿರ್ ಮಲಿಕ್ (40) ಮತ್ತು 15 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.
ಮಾರ್ಚ್ 16ರಂದು ಸುಳಿವು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ದೆಹಲಿ-ಎನ್‌ಸಿಆರ್‌ನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಲ್ಲಿ ಒಬ್ಬರು ನಾವು ಪಶ್ಚಿಮ ಬಂಗಾಳದ ನಿವಾಸಿಗಳು ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆ ಮತ್ತು ಪರಿಶೀಲನೆಯ ಬಳಿಕ ಬಂಧಿತರು ಬಾಂಗ್ಲಾದೇಶದ ಪ್ರಜೆಗಳು ಎಂದು ತಿಳಿದು ಬಂದಿದೆ. ಬಂಧಿತರನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ ದೆಹಲಿ) ಅಭಿಷೇಕ್ ಧಾನಿಯಾ ತಿಳಿಸಿದ್ದಾರೆ.