ನವದೆಹಲಿ: ಎಂಟು ವಿವಿಧ ದೇಶಗಳಲ್ಲಿ ಒಟ್ಟು 49 ಭಾರತೀಯರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಶಿಕ್ಷೆ ಜಾರಿಗಾಗಿ ಕಾಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ವಿಚಾರಣಾಧೀನ ಕೈದಿಗಳು ಸೇರಿದಂತೆ ವಿದೇಶಿ ಜೈಲುಗಳಲ್ಲಿ ಒಟ್ಟು 10,152 ಭಾರತೀಯ ಕೈದಿಗಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಯುಎಇಯಲ್ಲಿ ಅತಿ ಹೆಚ್ಚು ಅಂದರೆ 25 ಭಾರತೀಯ ಪ್ರಜೆಗಳಿಗೆ ಮರಣದಂಡನೆ ವಿಧಿಸಲಾಗಿದೆ. ಆದರೆ ತೀರ್ಪು ಇನ್ನೂ ಜಾರಿಗೆ ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.
ವಿದೇಶಗಳಲ್ಲಿ ಹಲವು ವರ್ಷಗಳಿಂದ ಮರಣದಂಡನೆಗಾಗಿ ಕಾಯುತ್ತಿರುವ ಭಾರತೀಯರ ಸಂಖ್ಯೆ ಮತ್ತು ಅವರ ಬಿಡುಗಡೆಗಾಗಿ ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉತ್ತರ ನೀಡಿದೆ.
"ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿದೇಶಿ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಸೇರಿದಂತೆ ಭಾರತೀಯ ಕೈದಿಗಳ ಸಂಖ್ಯೆ ಪ್ರಸ್ತುತ 10,152" ಎಂದು ಸಚಿವರು ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ, ಯುಎಇಯಲ್ಲಿ 25 ಭಾರತೀಯರು, ಸೌದಿ ಅರೇಬಿಯಾದಲ್ಲಿ 11, ಮಲೇಷ್ಯಾದಲ್ಲಿ ಆರು, ಕುವೈತ್‌ನಲ್ಲಿ ಮೂವರು ಮತ್ತು ಇಂಡೋನೇಷ್ಯಾ, ಕತಾರ್, ಅಮೆರಿಕ ಹಾಗೂ ಯೆಮೆನ್‌ನಲ್ಲಿ ತಲಾ ಒಬ್ಬರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
ವಿದೇಶಿ ಜೈಲುಗಳಲ್ಲಿ ಬಂಧಿಯಾಗಿರುವವರು ಸೇರಿದಂತೆ ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.