ನವದೆಹಲಿ: ಬಾಂಗ್ಲಾದೇಶದವರ ಅಕ್ರಮ ವಲಸೆ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದು, ಆರು ಮಂದಿಯನ್ನು ಗಡೀಪಾರು ಮಾಡಿದ್ದಾರೆ.
ದಕ್ಷಿಣ ದೆಹಲಿಯಲ್ಲಿ ನುಸುಳುಕೋರರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುತ್ತಿದ್ದ ಬಾಂಗ್ಲಾದೇಶದ ಎಂಟು ಮಂದಿ ಸೇರಿದಂತೆ ಇವರಿಗೆ ಸಹಕರಿಸುತ್ತಿದ್ದ ಅನೇಕ ಭಾರತೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆರು ಮಂದಿ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಮೂಲಕ ಗಡೀಪಾರು ಮಾಡಲಾಗಿದ್ದು, ಇನ್ನೂ ನಾಲ್ವರನ್ನು ಪರಿಶೀಲನೆಯಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಪಾವತಿಯಿಂದ ಬಾಂಗ್ಲಾದೇಶಕ್ಕೆ ಹಣ ಕಳಿಸುವ ಮೂಲಕ ಗಡಿಯಾಚೆಗೆ ಹಣ ಅಕ್ರಮ ವರ್ಗಾವಣೆ ಮಾಡಿರುವುದು, ನಕಲಿ ಗುರುತಿನ ದಾಖಲೆಗಳು ಸೇರಿದಂತೆ ತಮ್ಮ ಮಕ್ಕಳನ್ನು ದೆಹಲಿಯ ಶಾಲೆಗಳಿಗೆ ಸೇರಿಸಿರುವುದು ಶೋಧದ ಸಮಯದಲ್ಲಿ ಪತ್ತೆಯಾಗಿದೆ ಎಂದಿದ್ದಾರೆ.