ನಾಗರ್‌ಕರ್ನೂಲ್: ಶ್ರೀಶೈಲಂ ಎಡದಂಡೆ ಕಾಲುವೆಯಡಿಯಲ್ಲಿ ಸಿಲುಕಿರುವ ಎಂಟು ಜನರ ಪೈಕಿ ನಾಲ್ವರು ಇರುವ ಸ್ಥಳವನ್ನು ರಾಡಾರ್ ಮೂಲಕ ಪತ್ತೆ ಮಾಡಲಾಗಿದೆ ಎಂದು ರಾಜ್ಯ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣ ರಾವ್ ಶನಿವಾರ ತಿಳಿಸಿದ್ದಾರೆ.
ನೀರಾವರಿ ಸಚಿವ ಎನ್.ಉತ್ತಮ್ ರೆಡ್ಡಿ ಸೇರಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ತೆಯಾಗಿರುವ ನಾಲ್ವರನ್ನು ಭಾನುವಾರ ಸಂಜೆಯೊಳಗೆ ಹೊರತರುವ ಪ್ರಯತ್ನ ಮಾಡಲಾಗುವುದು' ಎಂದು ಹೇಳಿದರು.
'ಉಳಿದ ನಾಲ್ವರು ಟನಲ್ ಬೋರಿಂಗ್ ಯಂತ್ರದ(ಟಿಬಿಎಂ) ಅಡಿಯಲ್ಲಿ ಸಿಲುಕಿರುವ ಸಾಧ್ಯೆತೆಯಿದೆ' ಎಂದರು.
ನಾಲ್ವರು ಜೀವಂತವಾಗಿ ಹೊರಬರಲಿದ್ದಾರೆಯೇ ಎಂಬ ಪ್ರಶ್ನೆಗೆ, 'ನಾನು ಮೊದಲೇ ಹೇಳಿರುವ ಹಾಗೆ ಬದುಕಿರುವ ಸಾಧ್ಯತೆ ಅತ್ಯಂತ ಕ್ಷೀಣ' ಎಂದರು.
'ಸುಮಾರು 11 ಏಜೆನ್ಸಿಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕೆಸರು ಮತ್ತು ಮಣ್ಣಿನಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸಿಲುಕಿರುವ ಕಾರ್ಮಿಕರನ್ನು ಹೊರಗೆ ತರಲು 450 ಅಡಿ ಎತ್ತರದ ಟಿಬಿಎಂ ಅನ್ನು ಕತ್ತರಿಸಲಾಗುತ್ತಿದೆ' ಎಂದು ತಿಳಿಸಿದರು.
ಫೆಬ್ರುವರಿ 22ರಂದು ನಡೆದ ದುರಂತದಲ್ಲಿ ಪಂಜಾಬ್, ಜಾರ್ಖಂಡ್, ಗುಜರಾತ್ ಮೂಲದ 8 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ ಒಂದು ವಾರ ಕಳೆದಿದ್ದು, ಇಲ್ಲಿಯವರೆಗೆ ಒಬ್ಬ ಕಾರ್ಮಿಕನನ್ನು ಹೊರಗೆ ತರಲು ಸಾಧ್ಯವಾಗಿಲ್ಲ.
ಟಿಬಿಎಂ ತೆರವಿಗೆ ಪ್ರಯತ್ನ
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಟನೆಲ್ ಬೋರಿಂಗ್ ಮಷಿನ್‌ಅನ್ನು (ಟಿಬಿಎಂ) ಕತ್ತರಿಸಿ ತೆರವುಗೊಳಿಸುವ ಕೆಲಸದಲ್ಲಿ ನಿರತವಾಗಿವೆ. ಟಿಬಿಎಂ ಮೇಲೆ ಕಾಂಕ್ರೀಟ್ ಹಾಗೂ ಕಬ್ಬಿಣದಿಂದ ಕೂಡಿದ ಅವಶೇಷಗಳು ಬಿದ್ದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
'ಸುರಂಗದಿಂದ ನೀರು ಹೊರಹಾಕುವ ಮತ್ತು ಮಣ್ಣು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಾರ್ಮಿಕರು ಸಿಲುಕಿರುವ ಜಾಗಕ್ಕೆ ತೆರಳಲು ಟಿಬಿಎಂನ ಭಾಗಗಳನ್ನು ಕತ್ತರಿಸಿ ತೆಗೆಯಲಾಗಿದೆ' ಎಂದು ನಾಗರ್‌ಕರ್ನೂಲ್ ಎಸ್‌ಪಿ ವೈಭವ್ ಗಾಯಕ್ವಾಡ್ ತಿಳಿಸಿದರು.