ಕಾಬೂಲ್: ವಿಶ್ವಸಂಸ್ಥೆಯ ಸಹಯೋಗದಲ್ಲಿ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಶೇ 80ರಷ್ಟು ಕಾರ್ಯಾಚರಣೆಗಳು ಹಣಕಾಸು ಕೊರತೆಯಿಂದಾಗಿ ಜೂನ್ ವೇಳೆಗೆ ಸ್ಥಗಿತಗೊಳ್ಳಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
'ತುರ್ತು ಕ್ರಮ ಕೈಗೊಳ್ಳದಿದ್ದರೆ, 2025ರ ಜೂನ್ ವೇಳೆಗೆ ಸುಮಾರು 220ಕ್ಕೂ ಅಧಿಕ ಸೌಲಭ್ಯಗಳು ಅಂತ್ಯಗೊಳ್ಳಲಿವೆ.
ಇದರಿಂದಾಗಿ 18 ಲಕ್ಷಕ್ಕೂ ಹೆಚ್ಚು ಅಫ್ಗನ್ನರು ಪ್ರಾಥಮಿಕ ಆರೋಗ್ಯ ಸೌಕರ್ಯದಿಂದಲೂ ವಂಚಿತರಾಗಲಿದ್ದಾರೆ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಹಣಕಾಸು ಕೊರತೆಯಿಂದಾಗಿ ಈಗಾಗಲೇ 167 ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ ಎಂದೂ ತಿಳಿಸಿದೆ.
ಡಬ್ಲ್ಯುಎಚ್‌ಒದಿಂದ ಅಮೆರಿಕ ಹೊರಬರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದರು.
ಕೋವಿಡ್-19 ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯುಎಚ್‌ಒ ವಿಫಲವಾಗಿದೆ ಎಂದು ಟೀಕಿಸಿದ್ದ ಟ್ರಂಪ್, ಡಬ್ಲ್ಯುಎಚ್‌ಒ ನಮ್ಮನ್ನು ಅಳಿಸಿ ಹಾಕಲು ನೋಡಿತು, ಎಲ್ಲರೂ ನಮ್ಮನ್ನು ತುಳಿಯಲು ನೋಡಿದರು, ಆದರೆ ಅದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದರು.
'ಮುಂದಿನ 12 ತಿಂಗಳಲ್ಲಿ ಅಮೆರಿಕ ಡಬ್ಲ್ಯುಎಚ್‌ಒನಿಂದ ಹೊರಬರಲಿದೆ. ಜತೆಗೆ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಹಣಕಾಸಿನ ನೆರವನ್ನು ನಿಲ್ಲಿಸಲಿದೆ. ಸಂಸ್ಥೆಯಿಂದ ಹೊರಬರುವ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಲಿವೆ. ಅಲ್ಲದೆ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುವುದು, ಸಂಸ್ಥೆಯೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸಲು ಪಾಲುದಾರರನ್ನು ಮರು ನೇಮಕ ಮಾಡಲಾಗುವುದು' ಎಂದು ಹೇಳಿದ್ದರು.
ಕೆಲವು ದಿನಗಳ ನಂತರ, ಡಬ್ಲ್ಯುಎಚ್‌ಒಗೆ ಹಿಂದಿರುಗುವ ಬಗ್ಗೆ ಆಲೋಚಿಸಲಾಗುವುದು ಎಂದೂ ತಿಳಿಸಿದ್ದಾರೆ.
ಡಬ್ಲ್ಯುಎಚ್‌ಒನ ಒಟ್ಟು ನಿಧಿಯ ಶೇ 18ರಷ್ಟು ಕೊಡುಗೆಯನ್ನು ಅಮೆರಿಕ ನೀಡುತ್ತಿತ್ತು.