ದೀರ್ ಅಲ್ ಬಲಾಹ್ : ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಂದು (ಗುರುವಾರ) ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 85 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮ ಘೋಷಣೆಯಾದ ನಂತರ ಇಸ್ರೇಲ್ ಮಂಗಳವಾರ ನಡೆಸಿದ್ದ ಬಾಂಬ್ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಇದುವರೆಗೆ ಒಟ್ಟಾರೆ 592 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಆಡಳಿತವಿರುವ ಪ್ರದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್‌ನ ಈ ನಡೆಯಿಂದ ಜನವರಿ 19ರಂದು ಜಾರಿಗೆ ಬಂದಿದ್ದ ಕದನ ವಿರಾಮದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಗ್ಯ ಸಚಿವಾಲಯ ವಿಶ್ಲೇಷಿಸಿದೆ.
ಗಾಜಾಪಟ್ಟಿಯನ್ನು ತೊರೆಯುವಂತೆ ಪ್ಯಾಲೆಸ್ಟೀನಿಯನ್ನರನ್ನು ಮತ್ತೆ ಒತ್ತಾಯಿಸಲಾಗುವುದು ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಹೇಳಿದ್ದಾರೆ.
'ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರುವವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಹಿಂದೆಂದೂ ಕಂಡಿರದಷ್ಟು ತೀವ್ರತೆಯ ದಾಳಿ ನಡೆಸಲಾಗುತ್ತದೆ' ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಭಾರತ ಕಳವಳ: ಗಾಜಾ ಪಟ್ಟಿಯಲ್ಲಿನ ಪರಿಸ್ಥಿತಿ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಕದನ ವಿರಾಮದ ನಡುವೆಯೂ ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿಯನ್ನು ಪುನರಾರಂಭಿಸಿರುವುದರಿಂದ ಸಂತ್ರಸ್ತರಿಗೆ ತುರ್ತಾಗಿ ಮಾನವೀಯ ನೆರವು ಒದಗಿಸುವಂತೆ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ್ರಹಿಸಿದೆ.
ಹಮಾಸ್ ಸಂಘಟನೆಯವರು ಒತ್ತೆಯಾಳುಗಳ ಬಿಡುಗಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಹೇಳಿದೆ.