ಪೋರ್ಟ್ ಲೂಯಿಸ್: ಭಾರತ ಹಾಗೂ ಮಾರಿಷಸ್ ನಡುವಿನ ಬಾಂಧವ್ಯ ವೃದ್ಧಿಯ ಭಾಗವಾಗಿ ಉಭಯ ರಾಷ್ಟ್ರಗಳ ನಾಯಕರು ಎಂಟು ಒಪ್ಪಂದಗಳಿಗೆ ಬುದ್ಧವಾರ ಸಹಿ ಹಾಕಿದ್ದಾರೆ.
'ಗ್ಲೋಬಲ್ ಸೌಥ್' ಅಭಿವೃದ್ಧಿಯ ಮಹತ್ವಾಕಾಂಕ್ಷೆ ಯೋಜನೆಗೆ ಮಾರಿಷಸ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು.
ಕಡಲ ಭದ್ರತೆ ಹಾಗೂ ಮಾಹಿತಿ ಪರಸ್ಪರ ಹಂಚಿಕೊಳ್ಳುವಿಕೆ, ಗಡಿ ಭಾಗದಲ್ಲಿ ಪರಸ್ಪರ ಕರೆನ್ಸಿಗಳ ಬಳಕೆಗೆ ಅವಕಾಶ, ವ್ಯಾಪಾರ, ಅಕ್ರಮ ಹಣ ವರ್ಗಾವಣೆ ತಡೆಗೆ ಜಂಟಿ ಕಾರ್ಯಾಚರಣೆ, ಮಧ್ಯಮ ಸಣ್ಣ ಹಾಗೂ ಅತಿ ಸಣ್ಣ ಕೈಗರಿಕಾ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಒಡಂಬಡಿಕೆಗೆ ಸಹಿ ಹಾಕಿದವು.
ಪ್ರಧಾನಿ ಮೋದಿ ಅವರ ಎರಡು ದಿನಗಳ ಮಾರಿಷಸ್ ಭೇಟಿಯ ಕೊನೆಯ ದಿನವಾದ ಬುಧವಾರ, ಅಲ್ಲಿನ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಭಾರತದ ಸಶಸ್ತ್ರ ದಳವೂ ಕವಾಯತು ಮೂಲಕ ಭಾಗವಹಿಸಿತ್ತು. ಇದರೊಂದಿಗೆ ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯು ಪಡೆಯ 'ಆಕಾಶ ಗಂಗಾ' ಸ್ಕೈಡೈವಿಂಗ್ ತಂಡಗಳು ಭಾಗವಹಿಸಿದವು.
'ಮಹಾಸಾಗರ'ಕ್ಕೆ ಪ್ರಧಾನಿ ಮೋದಿ ಚಾಲನೆ
ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗೂಲಂ ಅವರೊಂದಿಗಿನ ಉಭಯ ಮಾತುಕತೆಯ ಕೆಲ ಅಂಶಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಗ್ಲೋಬಲ್ ಸೌಥ್ ಪರಿಕಲ್ಪನೆಯಡಿ 'ಮಹಾಸಾಗರ' ಅಥವಾ ಮಾರಿಷಸ್ ಮತ್ತು ಈ ಪ್ರದೇಶದ ಸಮಗ್ರ ಬೆಳವಣಿಗೆ ಹಾಗೂ ಭದ್ರತೆಗೆ ಸಮಗ್ರ ಯೋಜನೆಗೆ 'ಮಹಾಸಾಗರ' ಎಂದು ಮೋದಿ ನಾಮಕರಣ ಮಾಡಿದರು. ಹಿಂದೂ ಮಹಾಸಾಗರದಲ್ಲಿ ಚೀನಾದ ಹಿಡಿತ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತವು ಈ ಒಡಂಬಡಿಕೆಗಳಿಗೆ ಸಹಿ ಹಾಕಿರುವುದು ಮಹತ್ವ ಪಡೆದುಕೊಂಡಿದೆ.
ಉಚಿತ, ಮುಕ್ತ, ಸುರಕ್ಷಿತ ಹಾಗೂ ಭದ್ರತೆ ಇರುವ ಹಿಂದೂಮಹಾಸಾಗರವು ಭಾರತ ಮತ್ತು ಮಾರಿಷಸ್‌ನ ಸಮಾನ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಸೇನಾ ಸಹಕಾರ ಮತ್ತು ಕಡಲ ಭದ್ರತೆಯು ಪ್ರಮುಖ ಕಾರ್ಯತಂತ್ರದ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹಾಗೂ ಮಾರಿಷಸ್‌ನ ಪ್ರಧಾನಿ ರಾಮಗೂಲಂ ಅವರು ಹೇಳಿದರು.
ಮಾರಿಷಸ್ ಭೇಟಿಯ ಸಂದರ್ಭದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ, 'ಮಾರಿಷಸ್‌ಗೆ ಭದ್ರತೆ, ಆರ್ಥಿಕ ವಲಯ ಅಭಿವೃದ್ಧಿಪಡಿಸುವಲ್ಲಿ ಭಾರತವು ಸಂಪೂರ್ಣ ಸಹಕಾರ ನೀಡಲು ಬದ್ಧ' ಎಂದಿದ್ದಾರೆ.
'2015ರಲ್ಲಿ 'ಸಾಗರ್' ಎಂಬ ಯೋಜನೆ ಮೂಲಕ ಹಿಂದೂಮಹಾಸಾಗರ ಪ್ರದೇಶದಲ್ಲಿ ಎಲ್ಲಾ ರಾಷ್ಟ್ರಗಳ ಬೆಳವಣಿಗೆಗೆ ನೀತಿ ರೂಪಿಸುವ ನಿಟ್ಟಿನಲ್ಲಿ ಭಾರತವು, ಪ್ರಮುಖ ಪಾತ್ರ ವಹಿಸಿತ್ತು. ಇದಾದ 10 ವರ್ಷಗಳ ನಂತರ ಹೊಸ ಯೋಜನೆಯೊಂದನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಸಾಗರ್ ಮೂಲಕ ಸಾಗರದ ಸುತ್ತಲಿನ ರಾಷ್ಟ್ರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಮಹಾಸಾಗರ ಯೋಜನೆ ಜಾರಿಗೆ ತರಲಾಗಿದೆ. ಭವಿಷ್ಯದ ಹಿತದೃಷ್ಟಿಯಿಂದ ವ್ಯಾಪಾರ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆ ಮತ್ತು ಪರಸ್ಪರ ಭದ್ರತಾ ಸಹಕಾರಕ್ಕೆ ಒತ್ತು ನೀಡಲಾಗಿದೆ ಎಂದೆನ್ನಲಾಗಿದೆ.
ಮಾರಿಷಸ್‌ಗೆ ಹೊಸ ಸಂಸತ್ ಭವನ ಉಡುಗೊರೆ
ದ್ವೀಪ ರಾಷ್ಟ್ರ ಮಾರಿಷಸ್‌ಗೆ ಹೊಸದಾಗಿ ಸಂಸತ್ ಭವನವನ್ನು ಉಡುಗೊರೆಯಾಗಿ ಭಾರತ ನಿರ್ಮಿಸಲಿದೆ. ಇದರೊಂದಿಗೆ ತಂತ್ರಜ್ಞಾನಗಳ ಪರಸ್ಪರ ಹಂಚಿಕೊಳ್ಳುವ ಒಪ್ಪಂದವನ್ನು ಭಾರತ ಮಾಡಿಕೊಂಡಿದೆ.
'ಮಾರಿಷಸ್ ತನ್ನ ಕಡಲ ಗಡಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೇನಾ ನೆರವು ನೀಡಲು ಭಾರತ ಸದಾ ಬದ್ಧ. ಇದಕ್ಕಾಗಿ ಪೊಲೀಸ್ ಅಕಾಡೆಮಿ ಹಾಗೂ ರಾಷ್ಟ್ರೀಯ ಕಡಲು ಮಾಹಿತಿ ವಿನಿಯಮ ಕೇಂದ್ರವನ್ನು ಭಾರತ ಸ್ಥಾಪಿಸಲಿದೆ. ವಾಣಿಜ್ಯ ಹಡುಗುಗಳ ಸಂಚಾರ ಕುರಿತ ಮಾಹಿತಿ ವಿನಿಮಯ, ಕಡಲ ಮಾಹಿತಿ ಹಂಚಿಕೊಳ್ಳುವ ಮೂಲಕ ಹಿಂದೂಮಹಾಸಾಗರಕ್ಕೆ ಹೊಂದಿಕೊಂಡಿರುವ ಚಾಗೋಸ್ ದ್ವೀಪ ಸೇರಿದಂತೆ ಈ ಭಾಗದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಮಾರಿಷಸ್‌ನ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಭಾರತ ಗೌರವಿಸುತ್ತದೆ' ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಮಾರಿಷಸ್‌ನ ಹಿಂದಿನ ಪ್ರಧಾನಿ ಪ್ರವಿಂದ್ ಜಗನ್ನಾಥ್ ಅವರ ಅವಧಿಯಲ್ಲಿ ಮಾರಿಷಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಬ್ರಿಟನ್, ದ್ವೀಪ ರಾಷ್ಟ್ರದಲ್ಲಿರುವ ಅತಿ ದೊಡ್ಡ ದ್ವೀಪವಾದ ಡಿಯಾಗೊ ಗರ್ಸಿಯಾದಲ್ಲಿ ಬ್ರಿಟನ್- ಅಮೆರಿಕ ವಾಯು ನೆಲೆ ನಿರ್ಮಾಣಕ್ಕೆ 99 ವರ್ಷಗಳ ಗುತ್ತಿಗೆ ಆಧಾರದಲ್ಲಿ ಜಾಗ ನೀಡಬೇಕು ಎಂದು ಹೇಳಲಾಗಿತ್ತು. ಈ ವಿಷಯ ಕುರಿತು ಮರು ಚರ್ಚೆಗೆ ಹಾಲಿ ಪ್ರಧಾನಿ ರಾಮಗೂಲಂ ಅವರು ಬ್ರಿಟನ್‌ಗೆ ಹೇಳಿದ್ದಾರೆ.
'ಭಾರತ ಹಾಗೂ ಮಾರಿಷಸ್ ರಾಷ್ಟ್ರಗಳು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಹಾದಿಯಲ್ಲಿ ಪಾಲುದಾರ ರಾಷ್ಟ್ರಗಳಾಗಿವೆ. ಸೇನೆ ಅಥವಾ ಶಿಕ್ಷಣ, ಆರೋಗ್ಯ ಅಥವಾ ಬಾಹ್ಯಾಕಾಶ ಪ್ರಗತಿಯಲ್ಲಿ ನಾವು ಹೆಗಲು ಕೊಟ್ಟು ನಿಲ್ಲುತ್ತೇವೆ' ಎಂದು ಭಾರತ ಹೇಳಿದೆ.
'100 ಕಿ.ಮೀ. ಕೊಳವೆ ಮಾರ್ಗದ ಆಧುನೀಕರಣ, ಸಮುದಾಯ ಅಭಿವೃದ್ಧಿ ಯೋಜನೆಯಡಿ 50 ಕೋಟಿ ಮಾರಿಷಸ್ ರೂಪಾಯಿ ಮೌಲ್ಯದ ಕಾಮಗಾರಿ ಆರಂಭಿಸಲಾಗುವುದು. ಪರಸ್ಪರರಲ್ಲಿ ವ್ಯಾಪಾರ ವಹಿವಾಟು ವೃದ್ಧಿಗೆ ಸ್ಥಳೀಯ ಕರೆನ್ಸಿ ಬಳಕೆಗೆ ಒತ್ತು, ಸಂಚಾರಕ್ಕೆ ಮೆಟ್ರೊ ಸೇವೆ, ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ನಿರ್ಮಾಣ, ವ್ಯಾಪಾರ ಮತ್ತು ಪ್ರವಾಸೋದ್ಯಮದಲ್ಲಿ ರೂಪೇ ಕಾರ್ಡ್ ಬಳಕೆ' ಉಭಯ ರಾಷ್ಟ್ರಗಳು ಒಪ್ಪಿವೆ ಎಂದು ಹೇಳಲಾಗಿದೆ.
'ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯ ಕೇಂದ್ರ'ವನ್ನು ಇಬ್ಬರು ನಾಯಕರು ಮಾರಿಷಸ್‌ಗೆ ಸಮರ್ಪಿಸಿದರು.
'ಕೃತಕ ಬುದ್ಧಿಮತ್ತೆ ಹಾಗೂ ಡಿಪಿಐ ಮೂಲಕ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದಿಂದ ಮಾನವ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮಾರಿಷಸ್‌ನ ನಾಗರಿಕರಿಗೆ ಚಾರ್ ಧಾಮ್ ಯಾತ್ರಾ ಹಾಗೂ ಭಾರತದಲ್ಲಿ ರಾಮಾಯಣ ನಡೆದ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.