ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 6 ಮಹಿಳೆಯರು ಸೇರಿದಂತೆ 9 ಮಂದಿ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ ಒಟ್ಟಾರೆ ₹26 ಲಕ್ಷ ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪೊಳ್ಳು' ಹಾಗೂ 'ಅಮಾನವೀಯ' ನಕ್ಸಲ್ ಸಿದ್ಧಾಂತದಿಂದ ಬೇಸತ್ತು ಹಾಗೂ ನಿಷೇಧಿತ ಸಿಪಿಎಂ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಲ್ಬಣಗೊಂಡಿದ್ದರಿಂದ ಶರಣಾಗತಿ ನಿರ್ಧಾರ ಕೈಗೊಂಡಿದ್ದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಹೇಳಿದ್ದಾರೆ.
ಬಂಡು ಅಲಿಯಾಸ್ ಬಂಡಿ ಮಡಕಾಮ್ (22), ವೆಟ್ಟಿ ಕಣ್ಣಿ (45) ಹಾಗೂ ಪದಂ ಸಮ್ಮಿ (32) ಶರಣಾದವರಲ್ಲಿ ಪ್ರಮುಖರು. ಸುಕ್ಮಾ ಜಿಲ್ಲೆಯ ಮಿನಪಾ ಬಳಿ 2020ರಲ್ಲಿ 17 ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದ ಪ್ರಕರಣವೂ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಬಂಡು ಮೇಲಿದೆ.