ಚಂಡೀಗಢ: ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಭಾನುವಾರ) ಮೂರು ವರ್ಷ ಪೂರೈಸಿದ ಹಿನ್ನೆಲೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಭಗವಂತ ಮಾನ್ ಅವರು ಅಮೃತಸರದ ಸ್ವರ್ಣ ಮಂದಿರಲ್ಲಿ ಪ್ರಾರ್ಥನೆ ಸಲ್ಲಿಸಿದರು.
10 ದಿನಗಳ ವಿಪಶ್ಶನ ಧ್ಯಾನವನ್ನು ಪೂರ್ಣಗೊಳಿಸಿದ ಬಳಿಕ ಕೇಜ್ರಿವಾಲ್ ಅವರು ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಇಂದಿಗೆ ರಾಜ್ಯದಲ್ಲಿ ಎಎಪಿ ಅಧಿಕಾರ ವಹಿಸಿಕೊಂಡು ಮೂರು ವರ್ಷ ಕಳೆದಿದೆ. ಗುರು ಮಹಾರಾಜರ ಆಶೀರ್ವಾದವನ್ನು ಪಡೆದುಕೊಂಡೆವು. ಗುರುಗಳು ನಮಗೆ ಮಾರ್ಗದರ್ಶನ ನೀಡುತ್ತಿದ್ದು, ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಶಕ್ತಿಯನ್ನು ಒದಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಂಜಾಬ್‌ನನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಪ್ರತಿಜ್ಞೆ ಮಾಡಿದ್ದೆವು. ನಾವು ನೀಡಿದ ಭರವಸೆಯನ್ನು ಪೂರೈಸಲು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ರಾಜ್ಯದಲ್ಲಿ 3 ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಕಳೆದ 70 ವರ್ಷಗಳಲ್ಲಿಯೂ ಮಾಡಲಾಗಿಲ್ಲ. ಪಂಜಾಬಿಗಳಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ನಾವು ಈಡೇರಿಸುತ್ತೇವೆ. ಪಂಜಾಬ್‌ನಿಂದ ಮಾದಕ ವಸ್ತುಗಳ ದಂಧೆಯನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವ ನಿಟ್ಟಿನತ್ತ ಕ್ರಮಕೈಗೊಳ್ಳಲಾಗವುದು. ಪಂಜಾಬ್‌ನ ಜನರು ಎಎಪಿ ಸರ್ಕಾರದ ಮೇಲಿನ ನಂಬಿಕೆಗೆ ಮಾನ್ 'ಎಕ್ಸ್' ಪೋಸ್ಟ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ.