ನವದೆಹಲಿ, ಹಿಂದಿ ಭಾಷೆ ಬಳಸುವ ಗ್ರೋಕ್ ಎಐ ನಿಂದನಾತ್ಮಕ ಪ್ರತಿಕ್ರಿಯೆಗೆ ಸಂಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಜೊತೆ ಸಂಪರ್ಕದಲ್ಲಿದ್ದು, ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಚಿವಾಲಯವು ಈ ವಿಷಯ ಮತ್ತು ನಿಂದನೀಯ ಭಾಷೆಯ ಬಳಕೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ನಾವು ಎಕ್ಸ್ ಜೊತೆಗೆ ಸಂಪರ್ಕದಲ್ಲಿದ್ದೇವೆ. ಇದು ಏಕೆ ಮತ್ತು ಹೇಗೆ ನಡೆಯುತ್ತಿದೆ. ಸಮಸ್ಯೆಗಳೇನು ಎಂಬುದನ್ನು ಕಂಡುಹಿಡಿಯಲು ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಸಚಿವಾಲಯದ ಸಿಬ್ಬಂದಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಗ್ರೋಕ್, ಇಲಾನ್ ಮಸ್ಕ್ ಒಡೆತನದ ಎಕ್ಸ್‌ನ ಪ್ರಬಲ ಎಐ ಚಾಟ್‌ಬಾಟ್ ಆಗಿದ್ದು, ಬಳಕೆದಾರರಿಗೆ ಹಿಂದಿ ಆಡುಭಾಷೆಯಿಂದ ತುಂಬಿದ ನಿಂದನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದೆ. ಇದರಿಂದ ಆಘಾತಕ್ಕೊಳಗಾದ ನೆಟ್ಟಿಗರು ದೂರು ದಾಖಲಿಸಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಗ್ರೋಕ್ ಅನ್ನು '10 ಅತ್ಯುತ್ತಮ ಮ್ಯೂಚುವಲ್ ಫಂಡ್'ಪಟ್ಟಿ ಒದಗಿಸುವಂತೆ ವಿನಂತಿಸಿದಾಗ ಹಾಸ್ಯ ಮಾಡಿದೆ. ಸ್ವಲ್ಪ ಸಮಯ ಮೌನದ ನಂತರ, ಬಳಕೆದಾರರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದಾಗ, ಗ್ರೋಕ್ ಅಷ್ಟೇ ಸಾಂದರ್ಭಿಕ ಧಾಟಿಯಲ್ಲಿ ಅಶ್ಲೀಲ ಪ್ರತಿಕ್ರಿಯೆ ನೀಡುವ ಮೂಲಕ ಪ್ರತಿಕ್ರಿಯಿಸಿದೆ.
ಇದು ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದ್ದು ಗ್ರೋಕ್ ಎಐ ಭವಿಷ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ.