ಇದು AI ಜಗತ್ತು..ಜನ ತಾವು ಮಾಡುವ ಕೆಲಸಕ್ಕೆ AI ತಂತ್ರಜ್ಞಾನದ ಸಹಾಯ ತೆಗೆದುಕೊಳ್ತಾರೆ. ಈ ತಂತ್ರಜ್ಞಾನ ವ್ಯಾಪಕವಾಗಿ ಬೆಳೆದಿದೆ. ಇದನ್ನೇ ಗಮನಾರ್ಹವಾಗಿಟ್ಟುಕೊಂಡು, ಅಮೆರಿಕಾದ ಮೆಟಾ ಪ್ಲಾಟ್‌ಫಾರ್ಮ್ಸ್ ಮತ್ತು ಓಪನ್‌ಎಐ ತಮ್ಮ ಸೇವೆಗಳನ್ನು ಭಾರತದಲ್ಲಿ ವಿಸ್ತರಿಸಲು ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದೆ.
ಹೌದು, ಓಪನ್ ಎಐ ಮತ್ತು ರಿಲಯನ್ಸ್ ಜಿಯೋ ನಡುವೆ ಅಮೆರಿಕಾದ ChatGPT ವಿತರಣೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಚರ್ಚೆ ಪ್ರಕಾರ ChatGPT ಸೇವೆಯ ಚಂದಾದಾರಿಕೆ ಶುಲ್ಕವನ್ನು 20 ಡಾಲರ್‍ನಿಂದ ಕೆಲವೇ ಡಾಲರ್‌ಗಳಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಈ ಕುರಿತು ಓಪನ್‌ಎಐ ಚರ್ಚೆ ನಡೆಸಿದೆ. ಇತ್ತ ರಿಲಯನ್ಸ್ ತನ್ನ ಎಂಟರ್‌ಪ್ರೈಸ್ ಗ್ರಾಹಕರಿಗೆ API ಮೂಲಕ ಓಪನ್‌ಎಐ ಮಾದರಿಗಳನ್ನು ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿದೆ. ಜೊತೆಗೆ ಗ್ರಾಹಕರ ಡೇಟಾವನ್ನು ಭಾರತದೊಳಗೇ ಸಂಗ್ರಹಿಸಲು ಅವಕಾಶವಿರುವ ಬಗ್ಗೆ ರಿಲಯನ್ಸ್ ಚರ್ಚೆ ನಡೆಸುತ್ತಿದೆ.
ಇನ್ನು ರಿಲಯನ್ಸ್ ಕಂಪನಿ ಜಾಮ್‌ನಗರ ಮತ್ತು ಗುಜರಾತ್‌ನಲ್ಲಿ 3 ಗಿಗಾವ್ಯಾಟ್ ಡೇಟಾ ಸೆಂಟರ್ ನಿರ್ಮಿಸುತ್ತಿದೆ. ಇದರಲ್ಲಿ ಮೆಟಾ ಮತ್ತು ಓಪನ್‌ಎಐ ಮಾದರಿಗಳನ್ನು ಸ್ಥಳೀಯವಾಗಿ ಸಂಚಾಲನೆ ಮಾಡುವ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಉಸ್ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ಪೆಟ್ರೋಕೆಮಿಕಲ್ಸ್, ತೈಲ ಶೋಧನೆ, ಅನಿಲ ಪರಿಶೋಧನೆ, ದೂರಸಂಪರ್ಕ, ಚಿಲ್ಲರೆ ವ್ಯಾಪಾರ ಮತ್ತು ಹಸಿರು ಇಂಧನ ಕ್ಷೇತ್ರಗಳಲ್ಲಿ ತನ್ನ ಪಾದಾರ್ಪಣೆ ಮಾಡಿದೆ. ಆದರೆ ಈಗ ಎಐ ಕ್ಷೇತ್ರದಲ್ಲೂ ತನ್ನ ಹೂಡಿಕೆಯನ್ನು ವಿಸ್ತರಿಸಲು ಮುಂದಾಗಿದೆ. ಅಂದರೆ ತಮ್ಮ ಅಪ್ಲಿಕೇಶನ್‌ಗಳಲ್ಲಿ AI ಮಾದರಿಗಳನ್ನು ಬಳಕೆ ಮಾಡಲು ಅನುಕೂಲ ಮಾಡಿಕೊಡುವ ತಂತ್ರಜ್ಞಾನವಾಗಿದೆ. ಇದರಿಂದ, ಭಾರತದ ವಿವಿಧ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳು OpenAI ಯ ತಂತ್ರಜ್ಞಾನವನ್ನು ಬಳಸಲು ಅನುಕೂಲವಾಗಬಹುದು. ಇನ್ನು ಒಂದು ಪ್ರಮುಖವಾದ ವಿಷಯವೇನೆಂದರೆ ಭಾರತದ ಬಳಕೆದಾರರ ಡೇಟಾ ದೇಶದೊಳಗೇ ಉಳಿಯುವಂತೆ ನೋಡಿಕೊಳ್ಳಬಹುದು, ಇದು ಭಾರತ ಸರ್ಕಾರದ ಡೇಟಾ ಪ್ರಾಯವಳಿತ ನಿಯಮಗಳಿಗೆ ಅನುಗುಣವಾಗಿದೆ.
ಅಂದಹಾಗೆ ಓಪನ್‌ಎಐ ತನ್ನ ಉದ್ಯೋಗಿಗಳೊಂದಿಗೆ ಈ ಶುಲ್ಕವನ್ನು ಕೆಲವೇ ಡಾಲರ್‌ಗಳಿಗೆ ಕಡಿತಗೊಳಿಸುವ ಬಗ್ಗೆ ಚರ್ಚಿಸಿದ್ದು, ಇದರಿಂದ ಭಾರತದಂತಹ ದೇಶಗಳಲ್ಲಿ ಹೆಚ್ಚು ಬಳಕೆದಾರರು ಈ ಸೇವೆ ಬಳಸಲು ಸಾಧ್ಯವಾಗುತ್ತದೆ. ಆದರೆ, ಈ ಬೆಲೆ ಕಡಿತದ ಬಗ್ಗೆ ರಿಲಯನ್ಸ್ ಜಿಯೋ ಜೊತೆಗೆ ಯಾವುದೇ ನಿರ್ದಿಷ್ಟ ಚರ್ಚೆ ನಡೆದಿದೆ ಎನ್ನಲಾಗಿದೆ.
ಇನ್ನು ಈ ಕುರಿತ ಮಾತುಕತೆಗಳು ಯಶಸ್ವಿಯಾದರೆ ಭಾರತದಲ್ಲಿ ಎಐ ಸೇವೆಗಳು ಇನ್ನಷ್ಟು ಸುಲಭವಾಗಲಿವೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಲಭ್ಯವಾಗಬಹುದು. ಇದರಿಂದ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಅಂದರೆ ರಿಲಯನ್ಸ್ ಜಿಯೋ ಸಹಾಯದಿಂದ OpenAI ಮತ್ತು Meta Meta ತಮ್ಮ ಕೃತಕ ಬುದ್ಧಿಮತ್ತೆ ಸೇವೆಗಳನ್ನು ಭಾರತದ ಗ್ರಾಹಕರಿಗೆ ಸುಲಭವಾಗಿ ತಲುಪಿಸಬಹುದು. ಇದರಿಂದ ಸಣ್ಣ ಮತ್ತು ದೊಡ್ಡ ಉದ್ಯಮಗಳು AI ತಂತ್ರಜ್ಞಾನವನ್ನು ಬಳಸಲು ಹೆಚ್ಚು ಪ್ರೋತ್ಸಾಹಿತಗೊಳ್ಳುತ್ತವೆ. ಇದರಿಂದ ಪ್ರಸಾರ, ಶಿಕ್ಷಣ, ಉದ್ಯಮ, ಮತ್ತು ಹೊಸ ತಂತ್ರಜ್ಞಾನಗಳ ಪ್ರವೇಶ ಸುಲಭವಾಗುತ್ತದೆ.
ಇದಿಷ್ಟೇ ಅಲ್ಲ ಎಐ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗವಕಾಶಗಳು ಕೂಡ ಸೃಷ್ಟಿಯಾಗಬಹುದು. ಸ್ಟಾರ್ಟಪ್‌ಗಳಿಗೆ OpenAI API ಲಭ್ಯವಿದ್ದರೆ, ಹೊಸ AI ಆಧಾರಿತ ಉದ್ಯಮಗಳು ಬೆಳೆಯಲು ಅವಕಾಶ ಸಿಗುತ್ತದೆ. ಗ್ರಾಹಕರ ಡೇಟಾ ಭಾರತದಲ್ಲಿಯೇ ಉಳಿಯುವುದು, ಇದು ಭದ್ರತಾ ದೃಷ್ಟಿಕೋನದಿಂದ ಉತ್ತಮ. ಜೊತೆಗೆ ಭಾರತೀಯ ಭಾಷೆಗಳ ಬೆಂಬಲ ಹೆಚ್ಚಾಗಬಹುದು, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಿಗೂ AI ಮಾದರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಭಾರತೀಯ ಬಳಕೆದಾರರಿಗೆ ಅನುಗುಣವಾಗಿ AI ಸೇವೆಗಳನ್ನು ಸರಿಹೊಂದಿಸಬಹುದು. ಈ ಮಾತುಕತೆ ಯಶಸ್ವಿಯಾದರೆ ಇಷ್ಟೆಲ್ಲ ಪ್ರಯೋಜನಗಳಾಗುತ್ತವೆ.