ನವದೆಹಲಿ: ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದೆಹಲಿ ನ್ಯಾಯಾಲಯವು ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್ ಅವರಿಗೆ ನೋಟಿಸ್ ನೀಡಿದೆ.
ಬಾನ್ಸುರಿ ಸ್ವರಾಜ್ ಅವರ ವಿರುದ್ಧ ದೆಹಲಿ ಮಾಜಿ ಸಚಿವ, ಎಎಪಿ ನಾಯಕ ಸತ್ಯೇಂದ್ರ ಜೈನ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು 2025ರ ಫೆಬ್ರುವರಿ 20ರಂದು ದೆಹಲಿ ನ್ಯಾಯಾಲಯವು ವಜಾಗೊಳಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೈನ್ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್, ಬನ್ಸುರಿ ಸ್ವರಾಜ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ಏಪ್ರಿಲ್ 15ಕ್ಕೆ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.
2023ರ ಅಕ್ಟೋಬರ್ 5ರಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸ್ವರಾಜ್, ಸತ್ಯೇಂದ್ರ ಜೈನ್ ನಿವಾಸದಲ್ಲಿ 1.8 ಕೆ.ಜಿ ಚಿನ್ನ, 133 ಚಿನ್ನದ ನಾಣ್ಯಗಳು ಹಾಗೂ ₹3 ಕೋಟಿ ನಗದು ಪತ್ತೆಯಾಗಿದೆ ಎಂದು ಆರೋಪಿಸಿದ್ದರು.
ಸ್ವರಾಜ್ ಅವರು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ನನ್ನನ್ನು 'ಭ್ರಷ್ಟ' ಮತ್ತು 'ವಂಚಕ' ಎಂದು ಕರೆಯುವ ಮೂಲಕ ಮಾನಹಾನಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಜೈನ್ ದೂರಿನಲ್ಲಿ ಆರೋಪಿಸಿದ್ದರು.
ಒಂದು ವೇಳೆ ಬಾನ್ಸುರಿ ಸ್ವರಾಜ್ ವಿರುದ್ಧದ ಆರೋಪ ಸಾಬೀತಾದರೆ ಕ್ರಿಮಿನಲ್ ಮಾನನಷ್ಟಕ್ಕೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.