ಗುವಾಹಟಿ: ಲೂಟಿ ಮಾಡಿದ ಮತ್ತು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ನೀಡಿದ್ದ ಗಡುವನ್ನು ಮಣಿಪುರ ರಾಜ್ಯಪಾಲ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಮಾರ್ಚ್ 6ರವರೆಗೆ ವಿಸ್ತರಿಸಿ 'ಅಂತಿಮ ಅವಕಾಶ' ನೀಡಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ಬೆನ್ನಲ್ಲೇ ಫೆ.20ರಂದು ರಾಜ್ಯಪಾಲರು ಒಂದು ವಾರದೊಳಗೆ (ಫೆ.27) ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಿತವಾಗಿ ಒಪ್ಪಿಸುವಂತೆ ಸ್ವಯಂಸೇವಕರು ಮತ್ತು ಬಂಡುಕೋರರಿಗೆ ಸೂಚಿಸಿದ್ದರು.
ಆದರೆ, ಗಡುವು ಮುಗಿದ ಗುರುವಾರದವರೆಗೆ 500 ಶಸ್ತ್ರಾಸ್ತ್ರಗಳನ್ನು ಮಾತ್ರ ಒಪ್ಪಿಸಲಾಗಿದೆ.
ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನೀಡಿದ ಗಡುವು ವಿಸ್ತರಿಸುವಂತೆ ಮೈತೇಯಿ ಮತ್ತು ಕುಕಿ ಸಮುದಾಯಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದವು. ವಿವಿಧ ಸಂಘಟನೆಗಳ ಮನವಿಯನ್ನು ಪರಿಗಣಿಸಿ ಗಡುವನ್ನು ಮಾರ್ಚ್ 6ರವರೆಗೆ ವಿಸ್ತರಿಸಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
'ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಕೊನೆಯ ಅವಕಾಶವನ್ನು ನೀಡಿದ್ದೇವೆ. ಗಡುವು ಮುಗಿದ ಬಳಿಕ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯ ನಡೆಸಲಿದ್ದಾರೆ' ಎಂದು ಎಚ್ಚರಿಸಲಾಗಿದೆ.
2023ರಲ್ಲಿ ಪೊಲೀಸ್ ಠಾಣೆಗಳು ಮತ್ತು ಶಸ್ತ್ರಾಗಾರದಿಂದ 6 ಸಾವಿರಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಅದರಲ್ಲಿ ಇದುವರೆಗೆ ಸುಮಾರು ಎರಡು ಸಾವಿರ ಶಸ್ತ್ರಾಸ್ತ್ರಗಳನ್ನು ಮಾತ್ರ ಮರಳಿ ವಶಕ್ಕೆ ಪಡೆಯಲಾಗಿದೆ.
ಬಂಡುಕೋರರಿಂದ ಗುಂಡಿನ ದಾಳಿ
ಮಣಿಪುರದ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ ಪ್ರಾರ್ಥನಾ ಸ್ಥಳದ ಮೇಲೆ ಅಪರಿಚಿತ ಬಂಡುಕೋರರು ಶುಕ್ರವಾರ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯಾವುದ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಕ್ತರ ಗುಂಪೊಂದು ಭಾರಿ ಭದ್ರತೆಯಲ್ಲಿ ಮೈತೇಯಿ ಸಮುದಾಯದ ಪವಿತ್ರ ಕ್ಷೇತ್ರ ಎನಿಸಿರುವ ಕೊಂಗ್ಬಾ ಮರುಗೆ ಪ್ರಾರ್ಥನೆ ಸಲ್ಲಿಸಲು ಬೆಳಿಗ್ಗೆ 9.30ಕ್ಕೆ ಬಂದಾಗ ಗುಂಡಿನ ದಾಳಿ ನಡೆದಿದೆ. 'ಸಮೀಪದ ಬೆಟ್ಟಗಳ ಕಡೆಯಿಂದ ಒಟ್ಟು ಏಳು ಸುತ್ತು ಗುಂಡು ಹಾರಿಸಲಾಗಿದ್ದು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯ ಸುದ್ದಿ ಹಬ್ಬಿದಂತೆಯೇ ಸಮೀಪದ ಗ್ರಾಮಗಳ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ದಾಳಿ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.